ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಮನೆಗೆ ಕಾರು ನುಗ್ಗಿಸಿ, ದಾಂಧಲೆ ನಡೆಸಿದವ ಗುಂಡೇಟಿಗೆ ಬಲಿ
ಜಮ್ಮು, ಆ.4-ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಪೆರೆನ್ಸ್(ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಮನೆಗೆ ಕಾರು ನುಗ್ಗಿಸಲು ಯತ್ನಿಸಿ ಆತಂಕ ಸೃಷ್ಟಿಸಿದ ವ್ಯಕ್ತಿಯೊಬ್ಬನನ್ನು ಭದ್ರತಾ ಪಡೆ ಗುಂಡಿಟ್ಟು ಕೊಂದಿರುವ ಘಟನೆ ಇಂದು ಬೆಳಗ್ಗೆ ಜಮ್ಮುವಿನಲ್ಲಿ ನಡೆದಿದೆ. ಹತನಾದ ವ್ಯಕ್ತಿಯನ್ನು ಪೂಂಚ್ ಜಿಲ್ಲೆಯ ಮೆಂಧರ್ ನಿವಾಸಿ ಮುರ್ತಜ್ ಎಂದು ಗುರುತಿಸಲಾಗಿದೆ.
ಜಮ್ಮುವಿನ ಭಟಿಂಡಿ ಪ್ರದೇಶದಲ್ಲಿರುವ ಶ್ರೀನಗರ ಕ್ಷೇತ್ರದ ಲೋಕಸಭೆ ಸದಸ್ಯರೂ ಆದ ಫಾರೂಕ್ ಅಬ್ದುಲ್ಲಾ ಅವರಮನೆಯ ಮುಖ್ಯದ್ವಾರಕ್ಕೆ ಅತಿ ವೇಗದಿಂದ ಕಾರನ್ನು ನುಗ್ಗಿಸಿ ಕೆಳಗಿಳಿದ ಈತ ಮನೆಯೊಳಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಧ್ವಂಸಗೊಳಿಸಿ ದಾಂಧಲೆ ನಡೆಸಿದ. ಇದರಿಂದ ಆತಂಕಕ್ಕೆ ಒಳಗಾದ ಭದ್ರತಾ ಸಿಬ್ಬಂದಿ ಆತನ ಮೇಲೆ ಗುಂಡು ಹಾರಿಸಿ ಹತ್ಯೆಗೈದರು. ಮನೆಯೊಳಗಿನ ಮೆಟ್ಟಿಲುಗಳ ಬಳಿ ಆತನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಝಡ್ ಪ್ಲಸ್ ಶ್ರೇಣಿಯ ಭದ್ರತೆ ಹೊಂದಿರುವ ಫಾರೂಕ್ ಅವರ ಮನೆಯ ಮೇಲೆ ನಡೆದ ಈ ದಾಳಿಯಿಂದ ಪ್ರಮುಖ ಭದ್ರತಾ ಲೋಪಕ್ಕೆ ಎಡೆ ಮಾಡಿಕೊಟ್ಟಿದೆ. ಹತನಾದ ಮುರ್ತಜ್ ತಂದೆ ಜಮ್ಮುವಿನ ಬನ್-ತಲಾಬ್ನಲ್ಲಿ ಗನ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಈತ ಕುಟುಂಬವನ್ನು ಈ ಹಿಂದೆ ಜಮ್ಮು ಪ್ರಾಂತ್ಯದಲ್ಲಿ ವಾಸವಾಗಿತ್ತು.