ಹುಲಿ ಬಾಯಿಗೆ ಆಹಾರವಾಗಿದ್ದ ಕುರಿಗಾಯಿ ದೇಹದ ಅವಶೇಷಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹುಣಸೂರು, ಮೇ 27- ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸೋಮವಾರ ಆಡು, ಕುರಿ ಮೇಯಿಸಲು ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ನೇರಳಕುಪ್ಪೆ ಬಿ ಹಾಡಿಯ ಜೇನು ಕುರುಬ ವೃದ್ದ ಜಗದೀಶ ಹುಲಿ ದಾಳಿಗೆ ಸಿಲುಕಿದ್ದು ಆತನ ದೇಹದ ಅವಶೇಷಗಳು ಅರಣ್ಯದ ಹಂದಿಹಳ್ಳದಲ್ಲಿ ನಿನ್ನೆ ಪತ್ತೆಯಾಗಿದೆ.

ಹುಣಸೂರು ವನ್ಯಜೀವಿ ವಿಭಾಗದ ಮುದ್ದನಹಳ್ಳಿ ರಾಜ್ಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಾಗರಹೊಳೆ ಮುಖ್ಯಸ್ಥ ಮಹೇಶ್‍ಕುಮಾರ್, ಉಪ ವಿಭಾಗಾಕಾರಿ ವೀಣಾ, ಡಿವೈಎಸ್‍ಪಿ ಸುಂದರ್‍ರಾಜ್, ತಹಸೀಲ್ದಾರ್ ಐ.ಇ.ಬಸವರಾಜ್, ಎಸಿಎಫ್ ಪ್ರಸನ್ನಕುಮಾರ್, ವೃತ್ತ ನಿರೀಕ್ಷಕ ಪೂವಯ್ಯ ಹಾಗೂ ಗ್ರಾಮಾಂತರ ಠಾಣೆ ಎಸ್.ಐ.ಶಿವಪ್ರಕಾಶ್, ಆರ್‍ಎಫ್‍ಒ ಹನುಮಂತರಾಜ್, ಆನೆ ವೈದ್ಯ ಮುಝೀಭ್, ನೇತೃತ್ವದಲ್ಲಿ ಬಲರಾಮ, ಗಣೇಶ, ಅರ್ಜುನ, ಮಹೇಂದ್ರ, ಬೀಮ, ಅಭಿಮನ್ಯು ಸಾಕಾನೆಗಳ ಸಹಾಯದೊಂದಿಗೆ ಕೂಂಬಿಂಗ್ ನಡೆಸಲಾಯಿತು.

ಸಂಜೆ ವೇಳೆಗೆ ಆದಿವಾಸಿ ಜಗದೀಶನ ಮೃತ ದೇಹದ ರುಂಡ ಹಾಗೂ ಒಂದು ಕೈ ಹಾಗೂ ಒಂದು ಕಾಲು ಮಾತ್ರ ಪತ್ತೆಯಾಗಿದ್ದು ಉಳಿದ ದೇಹವನ್ನು ಹುಲಿ ತಿಂದು ಹಾಕಿದೆ.

# ಪತ್ತೆಗೆ ತಂಡ ರಚನೆ;
ಹುಲಿ ದಾಳಿಗೆ ತುತ್ತಾದ ಜಗದೀಶನ ಮೃತದೇಹದ ಪತ್ತೆಗೆ ಆರು ತಂಡಗಳನ್ನು ರಚಿಸಿ ಪ್ರತಿ ತಂಡಕ್ಕೆ ಒಂದು ಸಾಕಾನೆ, ಅರಣ್ಯ ಹಾಗೂ ಪೊಲಿಸ್ ಇಲಾಖೆ ಸಿಬ್ಬಂದಿ ಹಾಗೂ 3 ಮಂದಿ ಆದಿವಾಸಿಗಳನ್ನೊಳಗೊಂಡ 10 ಜನರ ತಂಡದೊಂದಿಗೆ ಒಟ್ಟು ಆರು ತಂಡಗಳು ಕೂಂಬಿಂಗ್ ಕಾರ್ಯಚರಣೆಗೆ ಇಳಿಸಲಾಯಿತು.

ಮಧ್ಯಾಹ್ನದ ವೇಳೆಗೆ ಬಲರಾಮ ಹಾಗೂ ಅಭಿಮನ್ಯು ಸಾಕಾನೆಗಳ ತಂಡಕ್ಕೆ ಕುರಿಗಾಹಿಯ ಮೇಲೆ ದಾಳಿ ನಡೆಸಿದ ಸ್ಥಳದ 50 ಮೀಟರ್ ದೂರದ ಹಂದಿಹಳ್ಳದಲ್ಲಿ ಜಗದೀಶನ ರುಂಡ ಹಾಗೂ ಕೈ, ಕಾಲನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದವು.

# ಬಳಕೆಗೆ ಬಾರದ ಡ್ರೋಣ್ ಕ್ಯಾಮೆರಾ:
ಹುಲಿ ಪತ್ತೆ ಹಾಗೂ ಮೃತ ದೇಹದ ಪತ್ತೆಗೆ ಇಲಾಖೆ ವತಿಯಿಂದ ಡ್ರೋಣ್ ಕ್ಯಾಮೆರಾ ಬಳಸಲಾಯಿತು. ಆದರೆ ಆರಣ್ಯ ಪ್ರದೇಶವು ಹಚ್ಚ ಹಸಿರಿನಿಂದ ಕೂಡಿರುವುದರಿಂದ ಕ್ಯಾಮೆರಾ ಬಳಕೆಗೆ ಬಾರಲಿಲ್ಲ . ಅಲ್ಲದೆ ಡ್ರೋಣ್ ಹಾರಾಟ ನಡೆಸಿದ ಹತ್ತೇ ನಿಮಿಷದಲ್ಲಿ ತಾಂತ್ರಿಕ ದೋಷದಿಂದ ಹಾರಾಟವನ್ನೇ ನಿಲ್ಲಿಸಿ ಬ್ಯಾಗ್ ನೊಳಗೆ ಸೇರಿಕೊಂಡಿತು.

# ಶಾಸಕ ಭೇಟಿ;
ಹುಲಿ ದಾಳಿ ನಡೆಸಿದ ಸ್ಥಳಕ್ಕೆ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ ಸ್ಥಳದಲ್ಲಿದ್ದ ಹಿರಿಯ ಅಕಾರಿಗಳೊಂದಿಗೆ ಘಟನೆಯ ಬಗ್ಗೆ ಚರ್ಚೆ ನಡೆಸಿದರು. ಮೃತಪಟ್ಟ ಆದಿವಾಸಿ ಜಗದೀಶರ ಮನೆಗೆ ಮೃತನ ಪತ್ನಿ ಗಂಗೆಮ್ಮರಿಗೆ ಸಾಂತ್ವಾನ ಹೇಳಿ ವೈಯಕ್ತಿಕವಾಗಿ ಹತ್ತು ಸಾವಿರ ರೂ ಸಹಾಯ ಧನ ನೀಡಿದರು.

ನಂತರ ಗ್ರಾಮಸ್ಥರು ಹಾಗೂ ಆದಿವಾಸಿಗಳೊಂದಿಗೆ ಸಭೆ ನಡೆಸಿ ಈಗಗಲೇ ಅರಣ್ಯ ಮಂತ್ರಿಗಳೊಂದಿಗೆ ಘಟನೆ ಬಗ್ಗೆ ಮಾತನಾಡಿದ್ದು, ಮೃತ ಜಗದೀಶರ ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡಲಾಗುವುದು, ಇದಲ್ಲದೆ ಜೂನ್ 8 ರಂದು ಅರಣ್ಯ ಭವನದಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ಪರಿಹಾರ ನೀಡಲು ಕ್ರಮ ವಹಿಸಲಾಗುವುದೆಂದು ಶಾಸಕರು ಭರವಸೆ ನೀಡಿದರು.

ಇಲ್ಲಿ ವನ್ಯಜೀವಿಗಳ ಹಾವಳಿಯಿಂದ ನಿತ್ಯ ನಮ್ಮ ಗೋಳು ಹೇಳತೀರದು, ನಾವು ಕಷ್ಟಪಟ್ಟು ಬೆಳೆದ ಬೆಳೆ ಒಂದೇ ರಾತ್ರಿ ಕಾಡಾನೆಗಳ ಪಾಲಾಗುತ್ತಿದೆ. ಅರೆ ಬರೆಯಾಗಿರುವ ಆನೆ ತಡೆಗೋಡೆಯ ರೈಲ್ವೆ ಕಂಬಿ ಬೇಲಿ ಯನ್ನು ಕೂಡಲೆ ಪ್ರಾರಂಭಿಸಬೇಕೆಂಬ ಮನವಿಗೆ ಶಾಸಕ ಮಂಜುನಾಥ್ ಹಾಗೂ ಹಿರಿಯ ಆಕಾರಿಗಳು ಕೂಡಲೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಜಿ.ಪಂ.ಸದಸ್ಯ ಕಟ್ಟನಾಯಕ, ತಾಪಂ ಸದಸ್ಯೆ ಪುಷ್ಪಲತಾ ಗಣಪತಿ, ನೇರಳಕುಪ್ಪೆ ಗ್ರಾಪಂ ಆಧ್ಯಕ್ಷ ಕೆ.ಡಿ.ಮಹೇಶ್, ಜಿಲ್ಲಾ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಪರಿಶಿಷ್ಟ ವರ್ಗಗಳ ತಾಲ್ಲೂಕು ಅಕಾರಿ ಚಂದ್ರಶೇಖರ್, ಮುಖಂಡರಾದ ಆನಂರ್ ಲೋಕೇಶ್, ಸಂಜೀವ್, ಕಿರಂಗೂರು ಸ್ವಾಮಿ, ಗಿರಿಜನ ಮುಖಂಡರಾದ ಜೆ.ಟಿ.ರಾಜಪ್ಪ ,ಬಾಬು, ಮಧುರ, ಸೀತಮ್ಮ, ಕೆಂಪಮ್ಮ, ಸೇರಿದಂತೆ ಅನೇಕ ಮುಖಂಡರು ಹಾಗೂ ಅಕಾರಿಗಳು ಹಾಜರಿದ್ದರು.

# ಸಿಕ್ಕಿ ಬಿದ್ದ ನರಭಕ್ಷಕ


ಹುಲಿ ಹಾವಳಿಯಿಂದ ಬೆಚ್ಚಿ ಬಿದ್ದಿದ್ದ ಹುಣಸೂರು ಜನತೆ ನಿಟ್ಟುಸಿರು ಬಿಡುವಂತಾಗಿದೆ. ವೃದ್ಧ ಜಗದೀಶನನ್ನು ತಿಂದು ಕಾಡಿನಲ್ಲಿ ನಾಪತ್ತೆಯಾಗಿದ್ದ ನರಭಕ್ಷ ಹುಲಿ ಸಿಕ್ಕಿ ಬಿದ್ದಿದೆ.

ನರಭಕ್ಷಕನ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸಿದ್ದರು. ಡ್ರೋಣ್ ಬಳಸಿ ಹುಲಿ ಬೇಟೆಗೆ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಆದರೆ, ನಿನ್ನೆ ರಾತ್ರಿ ನಾಗರಹೊಳೆ ದಟ್ಟಾರಣ್ಯದ ನೇರಳಕುಪ್ಪೆ ಬಿ ಹಾಡಿ ಸಮೀಪ ಹುಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಜಗದೀಶ್ ಅವರನ್ನು ತಿಂದು ಹಾಕಿದ್ದ ಹುಲಿ ಯಾವ ಸಂದರ್ಭದಲ್ಲಿ ಯಾವ ರೀತಿ ನಮ್ಮ ಮೇಲೆ ದಾಳಿ ನಡೆಸುವುದೋ ಎಂಬ ಭೀತಿಗೆ ಒಳಗಾಗಿದ್ದ ಹುಣಸೂರು ಸುತ್ತಮುತ್ತಲಿನ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Facebook Comments

Sri Raghav

Admin