ಬಸ್‍ನಲ್ಲಿ ವಿದ್ಯಾರ್ಥಿನಿಗೆ ಕಿಸ್ ಕೊಟ್ಟ ಕಾಮುಕನಿಗಾಗಿ ಹುಡುಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಬಸ್‍ನಲ್ಲಿ ಎಂಜನಿಯರಿಂಗ್ ವಿದ್ಯಾರ್ಥಿನಿಗೆ ಸಿನಿಮಾ ಶೈಲಿಯಲ್ಲಿ ಮುತ್ತುಕೊಟ್ಟು ಪರಾರಿಯಾಗಿರುವ ಯುವಕನಿಗಾಗಿ ಬಾಗಲಕುಂಟೆ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಯುವಕನ ಪತ್ತೆಗಾಗಿ ಸಿಸಿ ಟಿವಿ ದೃಶ್ಯಾವಳಿ ಮತ್ತು ಕೆಎಸ್‍ಆರ್‍ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರಿಂದ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಎಂಜಿನಿಯರಿಂಗ್ ವಿದ್ಯಾರ್ಥಿನಿ ಗಣಪತಿ ಹಬ್ಬದ ನಿಮಿತ್ತ ಸ್ವಂತ ಊರು ಹುಬ್ಬಳ್ಳಿಗೆ ಹೋಗಿದ್ದು, ವಾಪಸ್ ಸೆ.12ರಂದು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಅದೇ ಬಸ್‍ನಲ್ಲಿದ್ದ ಅಪರಿಚಿತ ಯುವಕನೊಬ್ಬ ಆಕೆಯನ್ನು ಗುರಾಯಿಸಿದ್ದ. ಆದರೆ, ಅದಕ್ಕೆ ವಿದ್ಯಾರ್ಥಿನಿ ತಲೆಕೆಡಿಸಿಕೊಂಡಿರಲಿಲ್ಲ.

ಮಾರನೆದಿನ (ಸೆ.13) ಬೆಳಗ್ಗೆ 5 ಗಂಟೆ ಸುಮಾರಿಗೆ ಈ ಬಸ್ ಬೆಂಗಳೂರಿಗೆ ಬರುತ್ತಿದ್ದಂತೆ ಆತ ವಿದ್ಯಾರ್ಥಿನಿ ಸೀಟಿನ ಬಳಿ ಹೋಗಿದ್ದಾನೆ. ನಿದ್ರೆಯಲ್ಲಿದ್ದ ವಿದ್ಯಾರ್ಥಿನಿಗೆ ದಾಸರಹಳ್ಳಿ-ಪೀಣ್ಯ ಮಾರ್ಗಮಧ್ಯೆ ಮುತ್ತುಕೊಟ್ಟು ಲೈಂಗಿಕ ಕಿರುಕುಳ ನೀಡಿದ್ದಾನೆ.

ತಕ್ಷಣ ವಿದ್ಯಾರ್ಥಿನಿ ಎಚ್ಚರಗೊಂಡು ಆತನನ್ನು ಹಿಡಿಯುವಷ್ಟರಲ್ಲಿ ಆತ ಪೀಣ್ಯ ಬಸ್ ನಿಲ್ದಾಣದಲ್ಲಿ ಇಳಿದು ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಈ ಮಾರ್ಗದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಯುವಕನ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

Facebook Comments