ಸೈಕಲಾಜಿಕಲ್ ಥ್ರಿಲ್ಲರ್ ಮನರೂಪ ದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರರಂಗಕ್ಕೆ ಪ್ರವೇಶ ಮಾಡ ಬೇಕೆಂದು ಹಲವಾರು ಪ್ರತಿಭೆಗಳು ಸದಾ ತುದಿಗಾಲಲ್ಲಿ ನಿಂತಿರುತ್ತಾರೆ. ಆ ಸಾಲಿಗೆ ಸೇರಿರುವ ವ್ಯಕ್ತಿಯೇ ಕಿರಣ್ ಹೆಗ್ಡೆ. ಒಂದು ಸದಭಿರುಚಿಯ ವಿಭಿನ್ನ ಕಥಾನಕವನ್ನು ಪ್ರೇಕ್ಷಕರ ಮುಂದೆ ಇಡಬೇಕೆಂಬ ನಿಟ್ಟಿನಲ್ಲಿ ನಿರ್ದೇಶಿಸಿ ನಿರ್ಮಾಣ ಮಾಡಿರುವ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯೇ ಮನರೂಪ. ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದ್ದು, ಮಲ್ಟಿಪ್ಲೆಕ್ಸ್‍ಗಳಲ್ಲಿ ಹೆಚ್ಚು ಪ್ರದರ್ಶನವಾಗಲಿದೆ ಯಂತೆ.

ಇತ್ತೀಚೆಗೆ ತಂಡ ಪತ್ರಿಕಾಗೋಷ್ಠಿ ಯನ್ನು ಆಯೋಜಿಸಿದ್ದು, ನಿರ್ದೇಶಕ ಕಿರಣ್ ಹೆಗ್ಡೆ ಮಾತನಾಡಿ, ದುರ್ಗಮ ಅರಣ್ಯದಲ್ಲಿ ಯಾರೂ ಕಾಲಿಡದಂಥ ಅಜ್ಞಾತ ಸ್ಥಳಕ್ಕೆ ಹೋಗುವ ಐವರು ಹುಡುಗರು ಅಲ್ಲಿ ತಮಗೆ ಎದುರಾಗುವ ತವಕ, ತಲ್ಲಣಗಳನ್ನು ಹೇಗೆ ಫೇಸ್ ಮಾಡಿದರು ಎಂಬ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯೇ ಈ ಚಿತ್ರದ ಮುಖ್ಯ ಎಳೆ. ನಮ್ಮ ಮನದಾಳದ ಕನ್ನಡಿಯಲ್ಲಿ ಪ್ರತಿಫಲಿಸುವ ವಿಚಿತ್ರ ಭಾವನೆಗಳ ಕಥೆ ಇದಾಗಿದ್ದು, ಅಜ್ಞಾತ ಪ್ರದೇಶದಲ್ಲಿ ಅನಿರೀಕ್ಷಿತ ಸಂದರ್ಭಗಳಿಗೆ ಸಿಲುಕುವ ಹುಡುಗರು ಕೊನೆಗೆ ಪ್ರೇಕ್ಷಕರನ್ನು ಸಹ ತಮ್ಮ ಜೊತೆಗೇ ಕರಡಿ ಗುಹೆಗೆ ಕರೆದೊಯ್ಯುತ್ತಾರೆ.

ಕಾಡು ಎಂಬ ಕನ್ನಡಿಯಲ್ಲಿ ಗುಮ್ಮನ ರೂಪ ಪ್ರೇಕ್ಷಕರನ್ನು ರಂಜಿಸಲಿದೆ, ಭಯಭೀತಗೊಳಿಸಲಿದೆ, ಅಂತರಂಗಿಕವಾಗಿ ನಾವು ಎಷ್ಟು ಕ್ರೌರ್ಯರಾಗಿದ್ದೇವೆ ಎಂದು ಈ ಚಿತ್ರದ ಮೂಲಕ ತೋರಿಸಿದ್ದೇವೆ. 15 ವರ್ಷದ ಮಕ್ಕಳೂ ಈ ಚಿತ್ರ ನೋಡಬೇಕು ಎಂದೇ ಸೆನ್ಸಾರ್ ನವರು ಯು/ಎ ಕೊಟ್ಟಿದ್ದಾರೆ ಎನ್ನುವುದು ನನ್ನ ಭಾವನೆ. ಇದು ಹಾರರ್ ಚಿತ್ರ ಅಲ್ಲ ಥ್ರಿಲ್ಲರ್ ಎಂದು ಹೇಳಿದರು.

ಸಿ.ಎಂ.ಸಿ.ಆರ್. ಮೂವೀಸ್ ನಿರ್ಮಾಣದ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿರುವುದು ಸಿರ್ಸಿ ಬಳಿಯ ಕಾಡಿನಲ್ಲೇ. ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್., ಆರ್ಯನ್ ಹಾಗೂ ಶಿವಪ್ರಸಾದ್, ಐವರು ಗೆಳೆಯರಾಗಿ ನಟಿಸಿದ್ದಾರೆ. ಗೋವಿಂದರಾಜು ಅವರ ಕ್ಯಾಮೆರಾ ಕೈಚಳಕ, ಸರವಣ ಅವರ ಸಂಗೀತ ಈ ಚಿತ್ರಕ್ಕಿದೆ.  ನಾಯಕಿ ನಿಶಾ ಮಾತನಾಡಿ, ಪೂರ್ಣ ಎಂಬ ಪಾತ್ರ ನನ್ನದು. ಎಂಎನ್‍ಸಿಯಲ್ಲಿ ವರ್ಕ್ ಮಾಡುವ ಮಾಡ್ರನ್ ಹುಡುಗಿ ಎಂದು ಪರಿಚಯಿಸಿಕೊಂಡರು. ನಂತರ ದಿಲೀಪ್ ಮಾತನಾಡಿ, ಗೌರವ್ ಎಂಬ ಪಾತ್ರ ಮಾಡಿದ್ದೇನೆ. ಸ್ನೇಹಿತರನ್ನೆಲ್ಲ ಕಾಡಿಗೆ ಕರೆದುಕೊಂಡು ಹೋಗುವುದು ನಾನೇ ಎಂದು ಹೇಳಿದರು.

ಅಮೋಘ್ ಸಿದ್ದಾರ್ಥ್ ಸೇರಿದಂತೆ ಚಿತ್ರ ತಂಡದ ಕಲಾವಿದರು, ತಂತ್ರಜ್ಞರು ಚಿತ್ರದ ಕುರಿತು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಚಿತ್ರದಲ್ಲಿ ಬರುವ ಮೂವರು ಗುಮ್ಮ ಪ್ರಧಾನವಾಗಿದ್ದು, ಚಿತ್ರದ ಏರಿಳಿತಕ್ಕೆ ಕಾರಣ ರಾಗುತ್ತಾ ರಂತೆ. ಬಹುತೇಕ ಟೆಂಟ್ ಸಿನಿಮಾ ಸಂಸ್ಥೆಯ ಹುಡುಗರು ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ. ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಮನರೂಪ ಚಿತ್ರ ಪ್ರೇಕ್ಷಕರ ಮುಂದೆ ಈ ವಾರ ಬರುತ್ತಿದೆ.

Facebook Comments