ಮಂಡ್ಯದಲ್ಲಿ ಮೂವರು ಅರ್ಚಕರನ್ನು ಹತ್ಯೆ ಮಾಡಿದ್ದ ಹಂತಕರಿಗೆ ಪೋಲೀಸರ ಗುಂಡೇಟು..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಸೆ.14- ಇಲ್ಲಿನ ಪ್ರಸಿದ್ಧ ಶ್ರೀ ಅರ್ಕೇಶ್ವರ ದೇವಾಲಯದಲ್ಲಿ ಅರ್ಚಕರನ್ನು ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಗುಂಡು ಹಾರಿಸಿ ಸೆರೆ ಹಿಡಿದಿರುವ ಘಟನೆ ಮದ್ದೂರು ತಾಲ್ಲೂಕಿನ ಸಾದೊಳಲು ಗೇಟ್ ಬಳಿ ಮಧ್ಯರಾತ್ರಿ ನಡೆದಿದೆ. ಆರೋಪಿಗಳಾದ ಆಂಧ್ರಪ್ರದೇಶದ ವಿಜಿ , ತೊಪ್ಪನಹಳ್ಳಿ ಗ್ರಾಮದ ಮಂಜ , ಅರೆಕಲ್ ದೊಡ್ಡಿ ಗ್ರಾಮದ ಗಾಂಧಿ ಬಂಧಿತ ಆರೋಪಿಗಳಾಗಿದ್ದಾರೆ.

ಇಡೀ ಘಟನೆ ಮಂಡ್ಯ ಜಿಲ್ಲೆಯಲ್ಲಿ ಭಾರೀ ಆತಂಕ ಸೃಷ್ಟಿಸಿತ್ತು. ಕೊನೆಗೂ ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ತಂಡ ಖಚಿತ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ಕಾರ್ಯಾಚರಣೆ ಕೈಗೊಂಡಿದ್ದ ಗ್ರಾಮಾಂತರ ಪೋಲೀಸ್ ಠಾಣಾ ವೃತ್ತ ನಿರೀಕ್ಷಕ ಎನ್.ವಿ.ಮಹೇಶ್ ಹಾಗೂ ಪೂರ್ವ ಪೋಲೀಸ್ ಠಾಣೆಯ ಪಿಎಸ್‍ಐ ಶರತ್ ಕುಮಾರ್‍ರವರ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ಆರೋಪಿಗಳು ಇರುವ ಜಾಗದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅವರನ್ನು ಬಂಧಿಸಲು ತೆರಳಿದ್ದಾಗ ಆರೋಪಿಗಳಾದ ಆಂಧ್ರಪ್ರದೇಶದ ವಿಜಿ , ತೊಪ್ಪನಹಳ್ಳಿ ಗ್ರಾಮದ ಮಂಜ , ಅರೆಕಲ್ ದೊಡ್ಡಿ ಗ್ರಾಮದ ಗಾಂಧಿ ಎಂಬುವವರು ಪೋಲೀಸ್ ಸಿಬ್ಬಂದಿಗಳ ಮೇಲೆ ಕಲ್ಲು ಮತ್ತು ಚಾಕುಗಳಿಂದ ಹಲ್ಲೇ ನಡೆಸಲು ಮುಂದಾಗಿದ್ದಾರೆ.

ಬಳಿಕ ಎಚ್ಚೆತ್ತುಕೊಂಡ ಪೋಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರಾದರೂ ಪೊಲೀಸರ ಮಾತಿಗೆ ಕಿವಿಗೊಡದೆ ಆರೋಪಿಗಳು ಹಲ್ಲೇಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಪೊಲೀಸರು ಹಾರಿಸಿದ ಗುಂಡು ಆರೋಪಿಗಳ ಕಾಲಿಗೆ ತಗುಲಿದೆ. ಈ ವೇಳೆ ಗುಂಡೇಟಿನಿಂದ ಕುಸಿದು ಬಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಚರಣೆ ವೇಳೆ ಪೂರ್ವ ಪೋಲೀಸ್ ಠಾಣೆಯ ಪಿಎಸ್‍ಐ ಶರತ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಅನಿಲ್ ಕುಮಾರ್, ಕೃಷ್ಣ ಕುಮಾರ್‍ರವರು ತೀವ್ರವಾಗಿ ಗಾಯಗೊಂಡಿದ್ದು ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಬಳಿಕ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ 3 ಮಂದಿ ಆರೋಪಿಗಳನ್ನು ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ . ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿ ಕಾರ್ಯಾಚರಣೆ ಕೈಗೊಂಡ ಪೋಲೀಸ್ ಸಿಬ್ಬಂದಿ ವರ್ಗದವರನ್ನು ಪ್ರಶಂಸಿಸಿದರು.

Facebook Comments