ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಮೂವರು ಜೆಡಿಎಸ್ ಸಚಿವರ ತಲೆದಂಡ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 25- ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‍ಕುಮಾರಸ್ವಾಮಿ ಸೋಲಿಗೆ ಸಚಿವರುಗಳ ತಲೆದಂಡವಾಗುವ ಸಾಧ್ಯತೆಗಳು ಎದುರಾಗಿವೆ. ಮೂರು ಮಂದಿ ಸಚಿವರು 8ಕ್ಕೆ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದರೂ ನಿಖಿಲ್‍ಕುಮಾರಸ್ವಾಮಿಯವರು ಸೋಲು ಕಂಡಿದ್ದು, ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಚುನಾವಣೆಗೂ ಮೊದಲೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ಒಂದು ವೇಳೆ ನಿಖಿಲ್‍ಕುಮಾರಸ್ವಾಮಿ ಸೋಲು ಕಂಡರೆ ಅದರ ನೈತಿಕ ಹೊಣೆಯನ್ನು ನಾನೇ ಹೊರುತ್ತೇನೆ.

ನನ್ನ ಜಿಲ್ಲಾ ಉಸ್ತುವಾರಿಯಲ್ಲೇ ಚುನಾವಣೆ ನಡೆಯುತ್ತಿದೆ. ಮೈತ್ರಿ ಅಭ್ಯರ್ಥಿ ಸೋತರೆ ಜನ ನನ್ನನ್ನು ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ಆತ್ಮಪೂರ್ವಕವಾಗಿ ಒಪ್ಪುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈಗ ಅವರಾಗಿಯೇ ರಾಜೀನಾಮೆ ಕೊಡಬೇಕಾದ ಸನ್ನಿವೇಶ ಎದುರಾಗಿದೆ.

ಉಳಿದಂತೆ ಮಂಡ್ಯ ಜಿಲ್ಲೆಯಿಂದ ಸಚಿವರಾಗಿರುವ ಡಿ.ಸಿ.ತಮ್ಮಣ್ಣ ಮತ್ತು ಸಾ.ರಾ.ಮಹೇಶ್ ಈ ಇಬ್ಬರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಯುವ ಉತ್ಸಾಹಿ ಜೆಡಿಎಸ್ ಶಾಸಕರಿಗೆ ಸಚಿವ ಸ್ಥಾನ ನೀಡುವುದು, ಒಂದು ವೇಳೆ ಸಮ್ಮಿಶ್ರ ಸರ್ಕಾರ ಕಾಂಗ್ರೆಸ್‍ನ ಅತೃಪ್ತರಿಂದಾಗಿ ಇಕ್ಕಟ್ಟಿಗೆ ಸಿಲುಕಿದರೆ ಬಂಡೆದ್ದ ಶಾಸಕರಿಗೆ ಸಚಿವ ಸ್ಥಾನಗಳನ್ನು ಕೊಟ್ಟು ಕಾಂಗ್ರೆಸ್‍ನ್ನು ಸಮಾಧಾನಪಡಿಸಿ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ.

ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಮಳವಳ್ಳಿ ಬಿಟ್ಟು ಉಳಿದೆಲ್ಲಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಹೆಚ್ಚು ಮತ ಬಿದ್ದಿರುವುದು ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದೆ. ತನ್ನ ವರ್ಚಸ್ಸನ್ನು ಉಳಿಸಿಕೊಳ್ಳಲು ಪಕ್ಷ ಸಂಘಟನೆಗೆ ಹಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂದು ಹೇಳಲಾಗುತ್ತಿದೆ.

ಜನರ ವಿಶ್ವಾಸ ಗಳಿಸುವಲ್ಲಿ ಜಿಲ್ಲಾ ನಾಯಕರ ಎಡವಟ್ಟು ಮತ್ತು ಚುನಾವಣೆ ಸಂದರ್ಭದಲ್ಲಿ ಉದಾಸೀನತೆ ತೋರಿದವರ ಬಗ್ಗೆ ವರದಿಯನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಪಕ್ಷದ ಚಿಹ್ನೆಯಿಲ್ಲದೆ, ಚಲನಚಿತ್ರ ನಟರ ಬೆಂಬಲದಿಂದ ಸುಮಲತಾ ಅವರು ಚುನಾವಣಾ ಕಣಕ್ಕಿಳಿದರು.  ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಪರಿಸ್ಥಿತಿ ಆಧರಿಸಿ ರಾಜಕೀಯ ರಣತಂತ್ರ ರೂಪಿಸಲು ವಿಫಲರಾದರು.

ದೋಸ್ತಿ ಪಕ್ಷವಾದ ಕಾಂಗ್ರೆಸ್‍ನ ಕಾರ್ಯಕರ್ತರು, ಮುಖಂಡರು ಬಹಿರಂಗವಾಗಿಯೇ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಪ್ರಚಾರ ಮಾಡಿದರು. ಆ ಸಂದರ್ಭದಲ್ಲಾದರೂ ಮಧ್ಯಪ್ರವೇಶ ಮಾಡಿ ರಾಜಕೀಯವಾಗಿ ತಂತ್ರಗಾರಿಕೆ ರೂಪಿಸಬೇಕಿತ್ತು. ಅದ್ಯಾವುದನ್ನೂ ಮಾಡದೆ ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣ ಎಂದು ಆರೋಪಿಸಲಾಗಿದೆ. ಹೀಗಾಗಿ ಸಚಿವರ ತಲೆದಂಡ ಅನಿವಾರ್ಯ ಎಂಬ ಪರಿಸ್ಥಿತಿ ಎದುರಾಗಿದೆ.

ಇದೇ ವೇೀಳೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯ್‍ಶಂಕರ್ ಸೋಲಿಗೆ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರನ್ನು ಹೊಣೆ ಮಾಡಿ ಸಂಪುಟದಿಂದ ಕೈಬಿಡಬೇಕೆಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಪಟ್ಟು ಹಿಡಿಯಲಿದ್ದು, ಅನಿವಾರ್ಯ ಸಂದರ್ಭದಲ್ಲಿ ಜಿ.ಟಿ.ದೇವೇಗೌಡ ತಲೆದಂಡವಾಗುವ ಸಾಧ್ಯತೆಗಳು ಎದುರಾಗಬಹುದು ಎಂದು ಹೇಳಲಾಗಿದೆ.

Facebook Comments