ಮಂಡ್ಯ ಯುವಕನ ಕೊನೇ ಆಸೆ ಈಡೇರಿಸಲಿದ್ದಾರೆ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಫೆ.18- ನನಗೆ ಜೀವನ ಸಾಕಾಗಿ ಹೋಗಿದೆ, ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇನೆ, ನಾನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿ. ನನ್ನ ಅಂತ್ಯ ಸಂಸ್ಕಾರದಲ್ಲಿ ಅವರಿಬ್ಬರೂ ಪಾಲ್ಗೊಳ್ಳಬೇಕು ಎಂಬುದು ನನ್ನ ಕೊನೆಯ ಆಸೆಯಾಗಿದೆ ಎಂದು ಪತ್ರ ಬರೆದು ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ ತಾಲ್ಲೂಕಿನ ಕೋಡಿದೊಡ್ಡಿ ಗ್ರಾಮದ ಕೃಷ್ಣ (24) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ಹಲವು ದಿನಗಳಿಂದ ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಒಂಟಿಯಾಗಿರುತ್ತಿದ್ದನು ಎನ್ನಲಾಗಿದೆ. ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಕೃಷ್ಣ ಕೊಠಡಿಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೆಲ ಸಮಯದ ಬಳಿಕ ಮನೆಯವರು ಗಮನಿಸಿದಾಗ ಕೃಷ್ಣ ವಿಷ ಸೇವಿಸಿರುವುದು ತಿಳಿಯುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಡೆತ್‍ನೋಟ್ ಪತ್ತೆಯಾಗಿದೆ.

ಪತ್ರದಲ್ಲಿ ದಯವಿಟ್ಟು ನನ್ನನ್ನು ಎಲ್ಲರೂ ಕ್ಷಮಿಸಿ, ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ, ನಿಮಗೆ ನೋವು ಕೊಟ್ಟಿದ್ದೀನಿ, ಅಮ್ಮನಿಗೆ ಒಳ್ಳೆಯ ಮಗನಾಗಲಿಲ್ಲ, ಅಣ್ಣನಿಗೆ ಒಳ್ಳೆಯ ತಮ್ಮನಾಗಲಿಲ್ಲ, ಗೆಳೆಯರಿಗೆ ಸ್ನೇಹಿತನಾಗಲಿಲ್ಲ, ನಾನು ಪ್ರೀತಿಸಿದ ಯುವತಿಗೆ ಜೊತೆಗಾರನಾಗಿ ಬಾಳ ಸಂಗಾತಿಯಾಗಲು ವಿಫಲನಾಗಿದ್ದೇನೆ. ಆದ್ದರಿಂದ ನಾನು ನಿಮ್ಮಿಂದ ದೂರವಾಗಬೇಕೆಂದು ತೀರ್ಮಾನಿಸಿ ಸ್ವ ಇಚ್ಛೆಯಿಂದ ಮರಣ ಹೊಂದುತ್ತಿದ್ದೇನೆ ಎಂದು ಡೆತನೋಟ್ ಬರೆದಿಟ್ಟಿದ್ದಾನೆ.

ಮನವಿ ಈಡೇರಿಸಿ: ನಾನು ರಾಕಿಂಗ್ ಸ್ಟಾರ್ ಯಶ್ ಹಾಗೂ ಸಿದ್ದರಾಮಯ್ಯ ಅವರ ಅಪ್ಪಟ ಅಭಿಮಾನಿ. ನನ್ನ ಅಂತ್ಯಕ್ರಿಯೆಯಲ್ಲಿ ಇವರಿಬ್ಬರೂ ಆಗಮಿಸಬೇಕೆಂಬುದು ನನ್ನ ಕೊನೆಯ ಆಸೆ. ದಯವಿಟ್ಟು ಈಡೇರಿಸಿ ಪ್ಲೀಸ್ ಎಂದು ಡೆತ್‍ನೋಟ್‍ನಲ್ಲಿ ಬರೆದಿದ್ದಾನೆ. ಪೊಲೀಸರು ಸ್ಥಳದಲ್ಲಿ ದೊರೆತ ಟೆತ್‍ನೋಟ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

# ಅಂತ್ಯ ಸಂಸ್ಕಾರಕ್ಕೆ ಸಿದ್ದು:
ಆತ್ಮಹತ್ಯೆ ಮಾಡಿಕೊಂಡಿರುವ ಕೃಷ್ಣನ ಕೊನೆಯ ಆಸೆಯಂತೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ. ಆದರೆ, ಯಶ್ ಅವರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

Facebook Comments

Sri Raghav

Admin