ಮಂಗಳೂರಿನಲ್ಲಿ ಮುಂದುವರೆದ ಕಫ್ರ್ಯೂ, ಮಾರುಕಟ್ಟೆಗೆ ಬಂದವರಿಗೆ ಲಾಠಿ ಏಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.21- ಪೌರತ್ವ ಕಾಯ್ದೆ ವಿರೋಧಿಸಿ ನಡೆದ ವ್ಯಾಪಕ ಹಿಂಸಾಚಾರ, ಗೋಲಿಬಾರ್ ಘಟನೆ ಹಿನ್ನೆಲೆಯಲ್ಲಿ ಮಂಗಳೂರಿನ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಧಿಸಿರುವ ಕಫ್ರ್ಯೂವನ್ನು ಡಿ.22ರ ವರೆಗೆ ಮುಂದುವರಿಸಲಾಗಿದ್ದು, ಮಂಗಳೂರು ಸಂಪೂರ್ಣ ಸ್ತಬ್ಧವಾಗಿದೆ. ಬೆಳಗ್ಗೆ 6 ರಿಂದ 8ರ ವರೆಗೆ ಕಫ್ರ್ಯೂವನ್ನು ಸಡಿಲಗೊಳಿಸಿದ್ದು, ದಿನಸಿ, ತರಕಾರಿ, ಅಗತ್ಯ ವಸ್ತುಗಳನ್ನು ಕೊಳ್ಳಲು ಜನ ಮುಗಿಬಿದ್ದರು.

ಈ ಸಂದರ್ಭದಲ್ಲಿ ಕಫ್ರ್ಯೂ ಉಲ್ಲಂಘಿಸಿ ರಸ್ತೆ ಮತ್ತು ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144ನೆ ಸೆಕ್ಷನ್ ಜಾರಿಗೊಳಿಸಲಾಗಿದೆ. ಮೂಡಬಿದಿರೆಯ ಚಿನ್ನಯ್ಯಕೋಟೆಯಲ್ಲಿ ಇಂದು ನಡೆಯಬೇಕಿದ್ದ ಕಂಬಳವನ್ನು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿದೆ.

ಮಂಗಳೂರು ನಗರ, ಬಲ್ಮಠ, ಬಂಟ್ವಾಳ ಹಾಸ್ಟೆಲ್ ವೃತ್ತದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಕಫ್ರ್ಯೂ ಉಲ್ಲಂಘಿಸಿದವರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಒಟ್ಟಾರೆ ಮಂಗಳೂರು ನಗರ ಬಿಕೋ ಎನ್ನುತ್ತಿತ್ತು.  ಪೌರತ್ವ ಕಾಯ್ದೆ ವಿರೋಧಿಸಿ ಕಳೆದೆರಡು ದಿನಗಳ ಹಿಂದೆ ನಡೆದ ಪ್ರತಿಭಟನೆ, ಹಿಂಸಾಚಾರ, ಗೋಲಿಬಾರ್‍ನಲ್ಲಿ ಇಬ್ಬರು ಮೃತಪಟ್ಟಿದ್ದರು. ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಪೊಲೀಸ್ ಬಂದೋಬಸ್ತ್‍ನಲ್ಲಿ ಮೃತರ ಅಂತ್ಯಸಂಸ್ಕಾರ ಮಾಡಲಾಗಿದೆ. ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಮಂಗಳೂರು ಭೇಟಿಗೆ ಪೊಲೀಸರು ಅವಕಾಶ ನೀಡಿಲ್ಲ. ನಿನ್ನೆಯೇ ಮಂಗಳೂರಿಗೆ ಹೊರಟಿದ್ದ ಸಿದ್ದರಾಮಯ್ಯ ಅವರನ್ನು ಮಂಗಳೂರಿಗೆ ಬರದಂತೆ ಪೊಲೀಸರು ಮನವಿ ಮಾಡಿದ್ದರು. ಕಫ್ರ್ಯೂ ಮುಂದುವರಿದ ಹಿನ್ನೆಲೆಯಲ್ಲಿ ಇಂದು ಕೂಡ ಭೇಟಿಗೆ ಅವಕಾಶ ಕೊಟ್ಟಿಲ್ಲ. ಸ್ಥಳೀಯ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರೊಂದಿಗೆ ಪೊಲೀಸರು ಮಾತುಕತೆ ನಡೆಸಿ ಶಾಂತಿ ನೆಲೆಸುವ ಪ್ರಯತ್ನ ನಡೆಸಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಇನ್ನೂ ಎರಡು ದಿನ ಬೇಕಾಗುತ್ತದೆ.

Facebook Comments