ಮಂಗಳೂರಲ್ಲಿ ಸೆರೆಸಿಕ್ಕ 8 ಜನ ಶಂಕಿತ ಉಗ್ರರಲ್ಲ, ಹಾಗಾದರೆ ಯಾರವರು..?

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು/ಬೆಂಗಳೂರು, ಆ.17- ಶಸ್ತ್ರಾಸ್ತ್ರಗಳೊಂದಿಗೆ ಭಾರೀ ಡಕಾಯಿತಿ ನಡೆಸಲು ಸಜ್ಜಾಗಿದ್ದ 8 ಜನರ ಗ್ಯಾಂಗ್‍ವೊಂದನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.  ಸ್ಯಾಮ್ ಪೀಟರ್ (53),ಟಿ.ಕೆ.ಬೋಪಣ್ಣ(33),ಮದನ್(41), ಚಿನ್ನಪ್ಪ (38), ಸುನೀಲ್ ರಾಜು(35), ಕೋದಂಡರಾಮ(39), ಮೊಯಿದ್ದೀನ್(70) ಹಾಗೂ ಅಬ್ದುಲ್ ಲತೀಪ್(59) ಬಂಧಿತ ಆರೋಪಿಗಳು.

ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ 2 ಕಾರು, ಒಂದು ಪಿಸ್ತೂಲ್, ಒಂದು ರಿವಾಲ್ವರ್ ಮತ್ತು 8 ಜೀವಂತ ಗುಂಡುಗಳು, 10 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಇವರು ಮಂಗಳೂರು ನಗರದ ಪೆಂಪೆಲ್ ಬಳಿ ಭಾರೀ ದರೋಡೆಗೆ ಸಜ್ಜಾಗಿ ಕಾರಿನಲ್ಲಿ ಕುಳಿತು ಹೊಂಚು ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು 8 ಜನರ ಗ್ಯಾಂಗ್‍ನ್ನು ಬಂಧಿಸಿದ್ದಾರೆ.

ಸ್ಯಾಮ್‍ಪೀಟರ್ ಈ ತಂಡದ ನಾಯಕ. ಈತ ಕೇರಳ ಮೂಲದವನೆಂದು ಹೇಳಲಾಗಿದೆಯಾದರೂ ಪೀಟರ್ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲೂ ಹಲವು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿದ್ದಾನೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಿನ್ನೆ ರಾತ್ರಿ ಕಾರೊಂದರಲ್ಲಿ ಈ ಆರೋಪಿಗಳು ಮಂಗಳೂರು ನಗರದಲ್ಲಿ ಸಂಚರಿಸುತ್ತಿದ್ದರು. ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್‍ಗೆ ನಿಯೋಜಿತವಾಗಿದ್ದ ಪೊಲೀಸರು ಈ ವಾಹನವನ್ನು ತಪಾಸಣೆ ನಡೆಸಿದಾಗ ವಾಹನದ ಮೇಲೆ ಭಾರತ ಸರ್ಕಾರ ಎಂಬ ಬೋರ್ಡ್ ಹಾಕಲಾಗಿತ್ತು.

ಇದರಿಂದ ಅನುಮಾನಗೊಂಡ ಪೊಲೀಸರು ಸಫಾರಿ ಸಮವಸ್ತ್ರದಲ್ಲಿದ್ದ ಕಾರಿನ ಚಾಲಕ ಸೇರಿದಂತೆ ಮತ್ತಿತರರನ್ನು ವಿಚಾರಣೆಗೊಳಪಡಿಸಿದಾಗ ಇವರು ಸಮರ್ಪಕ ಉತ್ತರ ನೀಡಲಿಲ್ಲ. ಇವರೆಲ್ಲರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ತಮ್ಮ ಗ್ಯಾಂಗ್ ನಾಯಕ್ ಸ್ಯಾಮ್‍ಪೀಟರ್ ಸಾಯಿ ಆರ್ಯ ಲಾಡ್ಜ್‍ನಲ್ಲಿರುವುದಾಗಿ ಮಾಹಿತಿ ನೀಡಿದರು.

ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಸ್ಯಾಮ್‍ಪೀಟರ್ ಮತ್ತು ಆತನ ತಂಡದ ಉಳಿದವರನ್ನು ಬಂಧಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು.  ಪ್ರಾಥಮಿಕ ಹಂತದ ವಿಚಾರಣೆ ವೇಳೆ ಇವರು ಮಂಗಳೂರಿನಲ್ಲಿ ಭಾರೀ ದರೋಡೆ ಮತ್ತು ಡಕಾಯಿತಿಗೆ ಸಂಚು ರೂಪಿಸಿದ್ದರೆಂದು ತಿಳಿದುಬಂದಿದೆ ಎಂದು ಪೊಲೀಸ್ ಕಮೀಷನರ್ ಹರ್ಷ ತಿಳಿಸಿದ್ದಾರೆ.

ಈ ತಂಡ ಐವರು ಕೆಲವು ದಿನಗಳ ಹಿಂದಷ್ಟೇ ಕೇಂದ್ರದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗಿನಲ್ಲಿ ಬೆಂಗಳೂರಿಗೆ ಆಗಮಿಸಿ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಉದ್ಯಾನನಗರಿಯಲ್ಲೂ ದರೋಡೆಗೆ ಹೊಂಚು ಹಾಕುತ್ತಿದ್ದರು ಎಂಬ ಮಾಹಿತಿ ಕೂಡ ತಿಳಿದುಬಂದಿದೆ.

ಈ ಆರೋಪಿಗಳು ಈ ಹಿಂದೆಯೂ ಕೆಲವು ಜನರಿಗೆ ತಾವು ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಎಂದು ವಂಚಿಸಿ ಹಲವು ವಸ್ತುಗಳನ್ನು ದೋಚಿರುವ ಪ್ರಕರಣಗಳು ಸಹ ಬೆಳಕಿಗೆ ಬಂದಿದೆ.  ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸಿ ಇನ್ನು ಹೆಚ್ಚಿನ ವಿವರಗಳನ್ನು ಪಡೆಯಲಾಗುವುದು ಎಂದು ಕಮೀಷನರ್ ಹರ್ಷ ಅವರು ತಿಳಿಸಿದ್ದಾರೆ.

Facebook Comments

Sri Raghav

Admin