ಕೋಲಾರದಲ್ಲಿ ರಾಹುಲ್-ಮಂಗಳೂರಿನಲ್ಲಿ ಮೋದಿ ರಣಕಹಳೆ, ತಾರಕಕ್ಕೇರಿದ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.13- ರಾಜ್ಯದ ಮೊದಲ ಹಂತದ ಚುನಾವಣೆಗೆ ದಿನಗಣನೆ ಆರಂಭವಾ ಗಿದ್ದು, ಬಹಿರಂಗ ಪ್ರಚಾರಕ್ಕೆ ಮೂರು ದಿನಗಳು ಮಾತ್ರವೇ ಬಾಕಿಯಿರುವಂತೆಯೇ ಪ್ರಚಾರ ಕಾವೇರತೊಡಗಿದ್ದು ರಾಜ್ಯಕ್ಕೆ ಲಗ್ಗೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರು, ಬೆಂಗಳೂರಿನಲ್ಲಿಂದು ಬಿಜೆಪಿ ಪರ ರಣಕಹಳೆ ಮೊಳಗಿಸಿದರೆ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಚಿತ್ರದುರ್ಗ, ಕೋಲಾರ, ಮೈಸೂರಿನ ಕೆ.ಆರ್.ನಗರದಲ್ಲಿ ಕಾಂಗ್ರೆಸ್ ಪರ ಅಬ್ಬರದ ಪ್ರಚಾರ ನಡೆಸಿದರು.

ಏ.18ರಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ 16ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಪ್ರಮುಖ ಪಕ್ಷಗಳ ನಾಯಕರು ಕಾಲಿಗೆ ಚಕ್ರ ಕಟ್ಟಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿಯವರು ಈಗಾಗಲೇ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದ್ದು,

ಕೋಲಾರದಲ್ಲಿ ಇಂದು ಬೃಹತ್ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕಾಂಗ್ರೆಸ್ ಬಡಜನರಿಗೆ ಘೋಷಿಸಿರುವ ನ್ಯಾಯ್ ಯೋಜನೆಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮುಖ ಕಳೆಗುಂದಿದೆ ಎಂದು ವಾಗ್ದಾಳಿ ನಡೆಸಿದರು.

ನ್ಯಾಯ್ ಯೋಜನೆಗೆ ಹಣ ಎಲ್ಲಿಂದ ಬರುತ್ತದೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಿದ್ದಾರೆ. ನ್ಯಾಯ್ ಯೋಜನೆಗೆ ಮೋದಿ ಅವರ ಸ್ನೇಹಿತರಾದ ಅಂಬಾನಿಯಂತವರ ಜೇಬಿನಿಂದಲೇ ತಂದು ಕೊಡುತ್ತೇವೆ ಎಂದು ತಿರುಗೇಟು ನೀಡಿದರು. ಬ್ಯಾಂಕ್‍ನಿಂದ ಹಣ ಕಳ್ಳತನ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಬಹುತೇಕರ ಹೆಸರು ಮೋದಿ ಎಂದು ಇರುವುದು ಏಕೆ ಎಂದು ಲೇವಡಿ ಮಾಡಿದರು.

ಮೋದಿ ಅವರ ದೇಶದ ವಿಭಜನೆಯ ಸಿದ್ಧಾಂತ. ನಮ್ಮದು ದೇಶದ ಐಕ್ಯತೆಯ ಕಾಪಾಡುವುದು ಎಂದ ರಾಹುಲ್ ಕಳೆದ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದು, ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುವುದು ಮತ್ತು ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು.

ಅದನ್ನು ಈಡೇರಿಸಿಲ್ಲ, ಇತ್ತೀಚೆಗೆ ಆ ಬಗ್ಗೆ ಮಾತನ್ನು ಆಡುತ್ತಿಲ್ಲ. ಈ ಬಾರಿಯ ಬಿಜೆಪಿ ಪ್ರಣಾಳಿಕೆಯಲ್ಲಿ ಆ ಬಗ್ಗೆ ಪ್ರಸ್ತಾಪ ಇಲ್ಲ. ಚೌಕಿದಾರ್ ಎಂದು ಹೇಳಿಕೊಂಡು ಸುಳ್ಳು ಹೇಳಿದ್ದಾರೆ. ಕಾಂಗ್ರೆಸ್ ಯಾಕೆ ನಿಜ ಹೇಳಬಾರದು ಎಂದು ಪ್ರಶ್ನೆ ಎದುರಾದಾಗ ನಾವು ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಯೋಜನೆ ಮೂಲಕ ನೇರವಾಗಿ ಹಣ ಹಾಕುವ ನ್ಯಾಯ್ ಯೋಜನೆಯನ್ನು ರೂಪಿಸಲಾಯಿತು.

ಈ ಭರವಸೆ ಈಡೇರಿಸಲು ಸಾಧ್ಯವಿದೆ. ಒಂದು ವರ್ಷದಲ್ಲಿ 72 ಸಾವಿರದಂತ ಐದು ವರ್ಷದಲ್ಲಿ 3.5 ಲಕ್ಷ ನೀಡಲು ಸಾಧ್ಯವಿದೆ. ಮೋದಿ 15 ಲಕ್ಷ ಕೊಡುವ ಭರವಸೆ ಸುಳ್ಳಾಗಿರುವಾಗ ಕಾಂಗ್ರೆಸ್ ನ್ಯಾಯ್ ಮೂಲಕ ತನ್ನ ಭರವಸೆಗಳನ್ನು ಉಳಿಸಿಕೊಳ್ಳಲಿದೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗಿನ ತಮ್ಮ ಭಾಷಣದಲ್ಲಿ ಐದು ವರ್ಷದ ಆಡಳಿತ ಅಭಿವೃದ್ಧಿಯನ್ನು ಮಾತನಾಡುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವ ಬಗ್ಗೆ ವಿವರಣೆ ನೀಡುತ್ತಿಲ್ಲ. ಏಕೆಂದರೆ ಅವರು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ಅತ್ತ ದಕ್ಷಿಣ ಕನ್ನಡದಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. ರಾಷ್ಟ್ರದ ಐಕ್ಯತೆ, ಭದ್ರತೆಗಾಗಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದ ಅವರು, ಕಮಿಷನ್ ಸರ್ಕಾರ, ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ನೀಡುವಂತೆ ಮನವಿ ಮಾಡಿದರು.

ಜನರ ಸಂಕಷ್ಟಗಳ ಅರಿಯುವ ಬದಲು ಕೇವಲ ಟೀಕೆ ಮಾಡುವುದರಲ್ಲೇ ಪ್ರತಿಪಕ್ಷಗಳು ಕಾಲ ಹರಣ ಮಾಡುತ್ತಿವೆ. ಭ್ರಷ್ಟಾಚಾರವನ್ನು ಘೋಷಿಸಲು ಮಹಾಘಟಬಂಧನ್ ರೂಪಿಸಿಕೊಂಡಿವೆ. ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಭ್ರಷ್ಟಾಚಾರದ ಎಲ್ಲಾ ಚಟುವಟಿಕೆಗಳು ರದ್ಧಾಗಲಿವೆ ಎಂದು ಮೋದಿ ಹೇಳಿದರು.

Facebook Comments