ಬ್ರೇಕಿಂಗ್ : ಮಂಗಳೂರು ಗಲಭೆಯಲ್ಲಿ ಮೃತಪಟ್ಟವರಿಗೆ ಘೋಷಣೆ ಮಾಡಿದ್ದ ಪರಿಹಾರ ವಾಪಾಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು,ಡಿ.25- ಮಂಗಳೂರು ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರ ಮುಸ್ಲಿಂ ಸಮುದಾಯದ ಕುಟುಂಬಕ್ಕೆ  ಘೋಷಣೆ ಮಾಡಿದ್ದ 10 ಲಕ್ಷ ರೂ. ಪರಿಹಾರವನ್ನು ಸರ್ಕಾರ ಹಿಂಪಡೆಯಲು ಮುಂದಾಗಿದೆ.  ತನಿಖೆ ಮುಗಿದ ನಂತರ ಮೃತಪಟ್ಟವರು ನಿರಪರಾಧಿಗಳು ಎಂದು ಸಾಬೀತಾದರೆ ಮಾತ್ರ ಅವರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು.

ಈಗಾಗಲೇ ಘೋಷಣೆ ಮಾಡಿರುವ ಪರಿಹಾರ ವನ್ನು ಹಿಂಪಡೆಯಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆಯಲ್ಲಿ ಪಾಲ್ಗೊಂಡವರು ಅಮಾಯಕರಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ನಡುವೆ ನಾವು ಮೃತರ ಕುಟುಂಬಗಳಿಗೆ 10 ಲಕ್ಷ ಪರಿಹಾರ ಘೋಷಿಸಿದ್ದೆವು.

ಸಿಸಿಟಿವಿಯಲ್ಲಿ ಬಿಡುಗಡೆಯಾಗಿರುವ ದೃಶ್ಯಾವಳಿಗಳು ಬೇರೆಯದೇ ಸ್ವರೂಪ ಪಡೆದುಕೊಂಡಿರುವುದರಿಂದ ಪರಿಹಾರದ ಮೊತ್ತವನ್ನು ನೀಡುವುದಿಲ್ಲ ಎಂದು ಅವರು ತಿಳಿಸಿದರು. ಅಪರಾಧಿಗಳಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಿದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ತನಿಖೆಯಲ್ಲಿ ಅವರು ನಿರಪರಾಧಿಗಳೆಂದು ತಿಳಿದುಬಂದರೆ ಮಾತ್ರ ಮೃತರ ಕುಟುಂಬಕ್ಕೆ ಪರಿಹಾರ ಧನ ನೀಡುವುದಾಗಿ ಸ್ಪಷ್ಟಪಡಿಸಿದರು.

ಆರೋಪ ಸಾಬೀತಾದರೆ ಯಾವುದೇ ಕಾರಣಕ್ಕೂ ಪರಿಹಾರವನ್ನು ಕೊಡುವುದಿಲ್ಲ. ತನಿಖೆಯ ನಂತರವೇ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ ಎಂದು ಪುನರುಚ್ಚರಿಸಿದರು.
ಮಂಗಳೂರು ಗಲಭೆ ಹಿಂಸಾಚಾರದಲ್ಲಿ ಮೃತಪಟ್ಟಿದ್ದ ನೌಶಿಕ್ ಮತ್ತು ಜಲೀಲ್ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಆದರೆ ಇದಕ್ಕೆ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

Facebook Comments