2014ರಲ್ಲಿ ‘ಚಾಯ್‍ವಾಲಾ’ಎಂದು ಕಾಂಗ್ರೆಸಿಗ 2019ರ ಪ್ರಚಾರದಿಂದ ದೂರ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.28- ನರೇಂದ್ರ ಮೋದಿ ಅವರನ್ನು ಚಾಯ್‍ವಾಲಾ ಎಂದು ಲೇವಡಿ ಮಾಡಿ ಹೊಸ ನಾಮಕರಣಕ್ಕೆ ಕಾರಣವಾಗಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸಿಗ ಮಣಿಶಂಕರ್ ಅಯ್ಯರ್ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಚಾರದಿಂದ ದೂರ ಉಳಿದಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಣಿಶಂಕರ್ ಅಯ್ಯರ್ ಅವರ ಕೆಲವು ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದವು. ಮೋದಿ ಅವರನ್ನು ಚಾಯ್ ಮಾರುವವ ಮತ್ತು ನೀಚ ಎಂದೆಲ್ಲ ಜರಿದಿದ್ದು, ಚಾಯ್‍ವಾಲಾ ಎಂಬ ಲೇವಡಿಯನ್ನೇ ನರೇಂದ್ರ ಮೋದಿ ಅವರು ಸ್ಫೋಟಿವ್ ಆಗಿ ತೆಗೆದುಕೊಂಡು ದೇಶಾದ್ಯಂತ ಪ್ರಚಾರ ನಡೆಸಿದ್ದಲ್ಲದೆ ಜನರ ಪ್ರೀತಿ ಗಳಿಸಿದರು.

ಕಾಂಗ್ರೆಸ್ ನಾಯಕರುಗಳ ಅಡ್ಡ ಮಾತುಗಳು ಚುನಾವಣಾ ಕಣದಲ್ಲಿ ಭಾರೀ ಸದ್ದು ಮಾಡಿ ಪಕ್ಷಕ್ಕೆ ಸಾಕಷ್ಟು ಹಾನಿ ಮಾಡಿದ್ದವು. ಹೀಗಾಗಿ ಮಣಿಶಂಕರ್ ಅಯ್ಯರ್ ಅವರನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಚಾರದಿಂದ ದೂರ ಇಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರಜಾತಂತ್ರದ ಮಹಾಯುದ್ಧವಾದ ಲೋಕ ಸಮರದಲ್ಲಿ ಕಾಂಗ್ರೆಸ್‍ನ ಸಣ್ಣಪುಟ್ಟ ನಾಯಕ ರಿಂದ ಭಾರೀ ನಾಯಕರವರೆಗೂ ಎಲ್ಲರೂ ಪ್ರಚಾರ ಕಣದಲ್ಲಿ ಧುಮುಕಿದ್ದು, ಮೋದಿ ಸೋಲಿಗೆ ಟೊಂಕಕಟ್ಟಿ ನಿಂತಿದ್ದಾರೆ. ಆದರೆ, ಮಣಿಶಂಕರ್ ಅಯ್ಯರ್ ಅವರ ಫೋನ್ ಸ್ವಿಚ್‍ಆಫ್ ಆಗಿದೆ. ಎಷ್ಟು ಹುಡುಕಿದರೂ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಪತ್ತೆಯಾಗುತ್ತಿಲ್ಲ.

ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಮಣಿಶಂಕರ್ ಅಯ್ಯರ್ ಅವರನ್ನು ದೂರವಿಟ್ಟಿದೆಯೇ ಅಥವಾ ಆರೋಗ್ಯದ ಸಮಸ್ಯೆಗಳೇನಾದರೂ ಕಾಡುತ್ತಿವೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

Facebook Comments