ಬ್ಯಾಂಕ್ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಮಣಿಪುರ ಮೂವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.26- ಮಣಿಪುರದ ಬ್ಯಾಂಕ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಹಣಕ್ಕಾಗಿ ಬೆದರಿಕೆ ಹಾಕಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಮಣಿಪುರದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಣಿಪುರ ಮೂಲದ ಸಾರಂಗಥಂ ಗ್ಯಾನೇಶ್ವರ್ ಸಿಂಗ್ ಅಲಿಯಾಸ್ ಗೋಪಿ ಅಲಿಯಾಸ್ ಗೋಪೇಶ್ವರ ಸಿಂಗ್ (45), ಲಾರೆನ್‍ಲಕ್‍ಪಮ್ ಮಣಿಹರ್ ಸಿಂಗ್ (47), ತಂಗಜಾಮ್ ಮಂಡಕ್‍ಶೋರ್ ಸಿನ್ಹ (37)ಬಂಧಿತ ಆರೋಪಿಗಳು.

ಮಣಿಪುರ ರಾಜ್ಯದ ಕಂಗ್ಲೆಪಾಕ್ ಕಮರ್ಷಿಯ್ ಪಾರ್ಟಿ (ಅಂಗಂಬಾ ಗ್ರೂಪ್) ಹಣಕಾಸು ಕಾರ್ಯ ದರ್ಶಿ ಪರಿ ಮಿಟೆಲ್ ಹೆಸರಿನಲ್ಲಿ ಬ್ಯಾಂಕ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಹಣ ಕೊಡುವಂತೆ ಬೆದರಿಕೆ ಪತ್ರ ಕಳುಹಿಸಿ ಮೊಬೈಲ್ ಮುಖಾಂತರ ಕರೆ ಮಾಡಿ ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದರು. ಹಣ ಕೊಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಜೀವ ಬೆದರಿಕೆ ಹಾಕಿದ್ದ ಬಗ್ಗೆ ಮಣಿಪುರದ ಇಂಪ್ಲಾ ವೆಸ್ಟ್ ಡಿವಿಜನ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾಗ ಇವರು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ತಕ್ಷಣ ಮಣಿಪುರ ಪೊಲೀಸರು ಸಿಸಿಬಿ ಪೊಲೀಸರ ಸಹಕಾರ ಕೋರಿದ್ದರು. ಸಿಸಿಬಿ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡು ಆರ್‍ಎಂಸಿ ಯಾರ್ಡ್  ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ ಮೂವರನ್ನು ಬಂಧಿಸಿ

ಮಣಿಪುರ ಪೊಲೀಸರ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ಕುಲ್‍ದೀಪ್‍ಕುಮಾರ್ ಜೈನ್ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದರು.

Facebook Comments