ಯಾವುದೇ ಕಾರಣಕ್ಕೂ ಜೆಡಿಎಸ್ ಬಿಡಲ್ಲ : ಮಾಗಡಿ ಶಾಸಕ ಎ.ಮಂಜುನಾಥ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.9- ಯಾವುದೇ ಕಾರಣಕ್ಕೂ ಬೇರೆ ಯಾವುದೇ ಪಕ್ಷಕ್ಕೆ ಹೋಗುವ ಅನಿವಾರ್ಯತೆ ನನಗಿಲ್ಲ ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಗ್ ಸೇರುತ್ತಾರೆ, ಜೆಡಿಎಸ್ ಬಿಡುತ್ತಾರೆ ಎಂಬ ಸುದ್ದಿ ಊಹಾಪೋಹದಿಂದ ಕೂಡಿದ್ದು, ಸತ್ಯಾಂಶವಿಲ್ಲ ಎಂದು ಅಲ್ಲಗಳೆದರು.

ಒಂದು ವೇಳೆ ತಮಗೆ ರಾಜಕೀಯ ಅಸಹ್ಯವೆನಿಸಿದರೆ ರಾಜಕೀಯ ಬಿಟ್ಟು ಮನೆಯಲ್ಲಿರುತ್ತೇನೆ ಹೊರತು, ಬೇರೆ ಪಕ್ಷ ಸೇರುವುದಿಲ್ಲ. ಖಾಸಗಿ ಹೊಟೇಲ್‍ನಲ್ಲಿ ಆಕಸ್ಮಿಕವಾಗಿ ಮಾಗಡಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರನ್ನು ಭೇಟಿಯಾಗಿದ್ದು ನಿಜ.

ನಾಲ್ಕು ಬಾರಿ ತಮ್ಮ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ಅವರಿಗೆ ಗೌರವ ಕೊಡುವುದು ತಪ್ಪು ಎಂದಾದರೆ ಏನು ಮಾಡುವುದು. ರಾಜಕೀಯವಾಗಿ ಪರಸ್ಪರ ಬದ್ಧ ವೈರಿಗಳಿರಬಹುದು, ಆದರೆ ಸ್ನೇಹಮಯ ಸಂಬಂಧದಲ್ಲಿ ಭೇಟಿಯಾಗುವುದು ತಪ್ಪಲ್ಲ ಎಂದ ಅವರು, ಕುಟುಂಬ ಸದಸ್ಯರೊಂದಿಗೆ ಹೊಟೇಲ್‍ಗೆ ಹೋದಾಗ ಭೇಟಿಯಾಗಿದ್ದೆವು ಎಂದು ಹೇಳಿದರು.

ಕಾಂಗ್ರೆಸ್ ಅಥವಾ ಬೇರೆ ಪಕ್ಷಕ್ಕೆ ಸೇರುವ ಅಗತ್ಯ, ಅನಿವಾರ್ಯತೆ ಏನಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಆ ಪಕ್ಷದ ಒಡನಾಟವನ್ನು ಹತ್ತಿರದಿಂದ ಕಂಡಿದ್ದೇನೆ. ಮಾಗಡಿಯಲ್ಲಿ ಅತಿ ಹೆಚ್ಚು ಬಹುಮತದಿಂದ ತಮ್ಮನ್ನು ಮಾಡಿದ್ದಾರೆ. ಅವರ ಋಣ ತೀರಿಸಲು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸಿದರೆ ಫಲ ಸಿಗುವುದಿಲ್ಲ ಎಂದರು.

ನಮ್ಮ ಪಕ್ಷಕ್ಕೂ ಒಳ್ಳೆಯ ದಿನಗಳು ಬರಲಿವೆ. ಯಾವುದೇ ಸಂದರ್ಭದಲ್ಲಾದರೂ ಚುನಾವಣೆ ಎದುರಾಗಬಹುದು ಎಂದು ಈಗಾಗಲೇ ಕುಮಾರಸ್ವಾಮಿಯವರು ನಿರ್ದೇಶನ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಪಕ್ಷ ಸಂಘಟನೆಯೊಂದಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

Facebook Comments