ಹಬ್ಬದ ಸಂದರ್ಭದಲ್ಲಿ ಎಚ್ಚರ ವಹಿಸುವಂತೆ ಜನರಿಗೆ ಬಿಬಿಎಂಪಿ ಆಯುಕ್ತರ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.22- ಕಳೆದ ಒಂದು ವಾರದಿಂದ ನಗರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿವೆ. ಆದರೆ, ಹಬ್ಬದ ಸಂದರ್ಭದಲ್ಲಿ ಜನ ಮೈ ಮರೆಯಬಾರದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಒಣ ಕಸ ಸಂಗ್ರಹಕ್ಕೆ ನಿಗದಿಪಡಿಸಿರುವ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರತಿನಿತ್ಯ ಐದು ಸಾವಿರ ಸೋಂಕು ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದ ನಗರದಲ್ಲಿ ಇತ್ತೀಚೆಗೆ ಕೇವಲ ಮೂರು ಸಾವಿರ ಸೋಂಕು ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ ಎಂದರು. ಆದರೆ, ನಗರದ ಹೊರವಲಯಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಆ ಪ್ರದೇಶಗಳಲ್ಲೇ ಹೆಚ್ಚಿನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆಯುಕ್ತರು ವಿವರಿಸಿದರು.

ಹೊರವಲಯಗಳಲ್ಲೇ ಹೆಚ್ಚು ಮಾರ್ಷಲ್‍ಗಳನ್ನು ನಿಯೋಜಿಸಿ ಜನ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಲಾಗುತ್ತಿದೆ. ದಸರಾ ಹಬ್ಬದ ಬಳಿಕ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕೆಂದು ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡರು.

ಸಿಎ ಸೈಟ್‍ಗಳಲ್ಲಿ ಕಸ ಸಂಗ್ರಹ ಕೇಂದ್ರ: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿನಿತ್ಯ 4200 ಟನ್ ತ್ಯಾಜ್ಯದಲ್ಲಿ 1200 ಟನ್‍ನಷ್ಟು ಒಣ ಕಸ ಬರುತ್ತಿದ್ದು, ಅದನ್ನು ಚಿಂದಿ ಆಯುವವರು ಮತ್ತು ಸ್ವ ಸಹಾಯ ಗುಂಪುಗಳ ಸದಸ್ಯರು ವಾರಕ್ಕೆರಡು ಬಾರಿ ಒಣ ಕಸ ಸಂಗ್ರಹ ಮಾಡಲಿದ್ದಾರೆ ಎಂದರು. ಸಾರ್ವಜನಿಕರು ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಬೇರ್ಪಡಿಸಿ ಕೊಡುತ್ತಿರಲಿಲ್ಲ. ಹೀಗಾಗಿ ಹೊಸ ಟೆಂಡರ್ ಪದ್ಧತಿ ಜಾರಿಗೆ ತಂದಿದ್ದು, ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ.

ತ್ಯಾಜ್ಯ ವಿಂಗಡಿಸಿ ನೀಡದವರಿಗೆ ದಂಡ ವಿಧಿಸಲಾಗುವುದು. ಇದರಿಂದ ಶೇ.100ರಷ್ಟು ಕಸ ವಿಲೇವಾರಿ ಸುಲಭವಾಗುತ್ತದೆ. ಇದರ ಜತೆಗೆ ನಗರದಲ್ಲಿರುವ 7500ಕ್ಕೂ ಹೆಚ್ಚು ಚಿಂದಿ ಆಯುವವರಿಗೆ ಜೀವನ ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಆಯುಕ್ತರು ಹೇಳಿದರು.  ಪಾಲಿಕೆ ವ್ಯಾಪ್ತಿಯಲ್ಲಿ 167 ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿವೆ. ಅವುಗಳನ್ನು 198 ವಾರ್ಡ್‍ಗಳಿಗೂ ವಿಸ್ತರಣೆ ಮಾಡಲಾಗುವುದು. ಎಲ್ಲಿ ಜಾಗದ ಅಭಾವ ಎದುರಾಗುವುದೋ ಅಂತಹ ಪ್ರದೇಶಗಳಲ್ಲಿ ಬಿಡಿಎಯಿಂದ ಸಿಎ ನಿವೇಶನ ಪಡೆದು ತ್ಯಾಜ್ಯ ಸಂಗ್ರಹ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಅವರು ಹೇಳಿದರು.

ರೆವಿನ್ಯೂ ಬಡಾವಣೆಗಳೇ ಕಾರಣ: 800 ಚ.ಕಿ.ಮೀ. ಸುತ್ತಳತೆಯ ನಗರದ ಹೊರವಲಯಗಳಲ್ಲಿರುವ ಎಲ್ಲ ಬಡಾವಣೆಗಳೂ ರೆವಿನ್ಯೂ ನಿವೇಶನಗಳಾಗಿರುವುದರಿಂದಲೇ ಮಳೆ ಬಂದಾಗ ಹಾನಿ ಸಂಭವಿಸಲು ಕಾರಣ ಎಂದು ಮಂಜುನಾಥ್ ಪ್ರಸಾದ್ ಅಭಿಪ್ರಾಯಪಟ್ಟರು. ರೆವಿನ್ಯೂ ಬಡಾವಣೆಗಳಲ್ಲಿ ಬಹುತೇಕ ಮಂದಿ ಪ್ಲ್ಯಾನ್ ಪ್ರಕಾರ ಮನೆ ನಿರ್ಮಿಸುವುದಿಲ್ಲ. ಬಫರ್ ಝೋನ್‍ಗಳಲ್ಲೂ ಬೇಕಾಬಿಟ್ಟಿ ಮನೆ ನಿರ್ಮಿಸುತ್ತಿರುವುದರಿಂದ ಮಳೆಯಾದಾಗ ಹಾನಿಯಾಗುತ್ತಿದೆ ಎಂದರು.

ಈ ಹಿಂದೆ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿರುವುದರಿಂದ ಅಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿಲ್ಲ. ಇದೀಗ ಹೊರ ವಲಯಗಳ ವಸತಿ ಪ್ರದೇಶಗಳಲ್ಲೂ ದುರಸ್ತಿ ಕಾರ್ಯ ನಡೆಸಲಾಗುತ್ತಿದ್ದು, ಭವಿಷ್ಯದಲ್ಲಿ ಮಳೆ ಹಾನಿ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಮಾತನಾಡಿ, ನಗರದಲ್ಲಿ ಒಣತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಇದಕ್ಕಾಗಿ ಗೇಲ್ ಸಂಸ್ಥೆಯು ಪಾಲಿಕೆಗೆ 18 ವಾಹನಗಳನ್ನು ಹಸ್ತಾಂತರಿಸಿದೆ. ಪಾಲಿಕೆ ಜತೆ ಜನಸಾಮಾನ್ಯರೂ ಕೈ ಜೋಡಿಸಿ ಸಮರ್ಪಕ ಕಸ ವಿಲೇವಾರಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ವಿಶೇಷ ಆಯುಕ್ತ ರಂದೀಪ್, ಜಂಟಿ ಆಯುಕ್ತ ಸರ್ಫರಾಜ್ ಖಾನ್, ಮುಖ್ಯ ಅಭಿಯಂತರ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

Facebook Comments