ಮಾಜಿ ಪ್ರಧಾನಿ ಸಿಂಗ್ ಜತೆ ಎಚ್ಡಿಕೆ ಸೇರಿ ಐವರು ಸಿಎಂಗಳ ಭೇಟಿ
ನವದೆಹಲಿ, ಜೂ.16-ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಸಂಜೆ ನವದೆಹಲಿಯಲ್ಲಿ ನೀತಿ ಆಯೋಗದ ಮಹತ್ವದ ಸಭೆ ನಡೆಯಲಿದ್ದು, ಅದರಲ್ಲಿ ಚರ್ಚಿಸ ಬೇಕಾದ ಪ್ರಮುಖ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಆಡಳಿತವಿರುವ ನಾಲ್ಕು ರಾಜ್ಯಗಳ ಸಿಎಂಗಳು ಇಂದು ಬೆಳಿಗ್ಗೆ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್, ರಾಜಸ್ತಾನದ ಸಿಎಂ ಅಶೋಕ್ ಗೆಹ್ಲೋಟ್, ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಹಾಗೂ ಛತ್ತೀಸ್ಗಡ್ ಸಿಎಂ ಭೂಪೇಶ್ ಬಗೆಲ್ ಅವರು ಡಾ. ಸಿಂಗ್ ಅವರನ್ನು ಪತ್ರ್ಯೇಕವಾಗಿ ಭೇಟಿ ಮಾಡಿ ನೀತಿ ಆಯೋಗದ ಸಭೆಯನ್ನು ಪ್ರಸ್ತಾಪಿಸಬೇಕಾದ ರಾಜ್ಯಗಳಿಗೆ ಸಂಬಂಧಪಟ್ಟ ಮಹತ್ವ ವಿಷಯಗಳ ಕುರಿತು ಚರ್ಚಿಸಿದರು.
ರೈತರ ಜೀವನ ಮಟ್ಟ ಸುಧಾರಣೆ, ಕೃಷಿ ಕ್ಷೇತ್ರ ಅಭಿವೃದ್ಧಿಗೆ ಕೇಂದ್ರ ಲಭಿಸಬೇಕಾದ ಪ್ರಮುಖ ಯೋಜನೆಗಳು, ಅರಣ್ಯ ವೃದ್ಧಿ ಸೇರಿದಂತೆ ಕೆಲ ಮಹತ್ವದ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳು ಮಾಜಿ ಪ್ರಧಾನಿವರಿಂದ ಸಲಹೆ ಪಡೆದರು.
ಇಂದು ಸಂಜೆ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಹೊರತುಪಡಿಸಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಕೇಂದ್ರಾಡಳಿತಪ್ರದೇಶಗಳ ಲೆಫ್ಟಿನೆಂಟ್ಗೌರ್ನರ್ಗಳು, ಕೇಂದ್ರ ಸಚಿವರು ಮತ್ತು ಆಯಾರಾಜ್ಯಗಳ ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ.