ಮಂತ್ರಿ ಮಾಲ್‍ಗೆ ಬೀಗ ಜಡಿದ ಬಿಬಿಎಂಪಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.30- ಮಂತ್ರಿಮಾಲ್‍ನವರು ತೆರಿಗೆ ಪಾವತಿಸಲು ಬಿಬಿಎಂಪಿಗೆ ಕೊಟ್ಟಿದ್ದ ಚೆಕ್‍ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ಇಂದು ಮಾಲ್‍ಗೆ ಕೆಲಕಾಲ ಬೀಗ ಜಡಿಯಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಮಾಲ್‍ನ ಆಡಳಿತ ಮಂಡಳಿಯವರು 5 ಕೋಟಿ ರೂ. ಡಿಡಿ ನೀಡಿ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತೆ ಮಾಲ್ ತೆರೆಯಲು ಅನುವು ಮಾಡಿಕೊಟ್ಟರು.

ಕಳೆದ 2017ರಿಂದ ಮಂತ್ರಿಮಾಲ್‍ನವರು 37 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಬಡ್ಡಿ ಸೇರಿ 39 ಕೋಟಿ ರೂ. ತೆರಿಗೆ ಪಾವತಿಸಬೇಕಿತ್ತು. ಬಾಕಿ ಇರುವ ತೆರಿಗೆ ಪಾವತಿಸುವಂತೆ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶಿವಸ್ವಾಮಿ ಅವರು ನೋಟಿಸ್ ಜಾರಿ ಮಾಡಿದ್ದರು.

ಹೀಗಾಗಿ ಮಾಲ್‍ನವರು ತೆರಿಗೆ ಪಾವತಿಸಲು ಚೆಕ್ ನೀಡಿದ್ದರು. ಆದರೆ, ಅವರು ನೀಡಿದ್ದ ಚೆಕ್ ಬೌನ್ಸ್ ಆದ್ದರಿಂದ ಇಂದು ಶಿವಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಮಾಲ್‍ಗೆ ಬೀಗ ಜಡಿದರು. ಈ ಸಂದರ್ಭದಲ್ಲಿ ಕಾಲಾವಕಾಶ ನೀಡುವಂತೆ ಮಾಲ್‍ನ ಆಡಳಿತ ಮಂಡಳಿಯವರು ಕೇಳಿಕೊಂಡರೂ ತೆರಿಗೆ ಕಟ್ಟುವವರೆಗೆ ಮಾಲ್ ತೆರೆಯಲು ಅವಕಾಶ ನೀಡಲು ಸಾಧ್ಯವೇ ಇಲ್ಲ ಎಂದು ಶಿವಸ್ವಾಮಿ ಪಟ್ಟು ಹಿಡಿದರು.

ತಕ್ಷಣ ಆಡಳಿತ ಮಂಡಳಿಯವರು 5 ಕೋಟಿ ರೂ.ಗಳ ಡಿಡಿ ಕೊಟ್ಟು ಉಳಿದ ತೆರಿಗೆಯನ್ನು ಅಕ್ಟೋಬರ್ ವೇಳೆಗೆ ಪಾವತಿಸುವುದಾಗಿ ಭರವಸೆ ನೀಡಿದ್ದರಿಂದ ಮಾಲ್ ತೆರೆಯಲು ಮತ್ತೆ ಅವಕಾಶ ಕಲ್ಪಿಸಿಕೊಡಲಾಯಿತು. ಅಕ್ಟೋಬರ್ ವೇಳೆಗೆ ಮಾಲ್‍ನವರು ಪೂರ್ಣ ಪ್ರಮಾಣದಲ್ಲಿ ತೆರಿಗೆ ಪಾವತಿಸದಿದ್ದರೆ ಮತ್ತೆ ಬೀಗ ಜಡಿಯುವುದಾಗಿ ಇದೇ ಸಂದರ್ಭದಲ್ಲಿ ಶಿವಸ್ವಾಮಿ ಎಚ್ಚರಿಕೆ ನೀಡಿದರು.

Facebook Comments