ಮಂತ್ರಿ ಮಾಲ್ ಕಟ್ಟಡ ತೆರವು..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.13- ಮಂತ್ರಿ ಮಾಲ್ ಮತ್ತು ಮಂತ್ರಿಗ್ರೀನ್ ಅಪಾರ್ಟ್‍ಮೆಂಟ್ ಕಟ್ಟಡಗಳ ಜಾಗದಲ್ಲಿ 4.28 ಎಕರೆ ಸರ್ಕಾರಿ ಸ್ವತ್ತಿನಲ್ಲಿ ನಿರ್ಮಿಸಿರುವ ಕಟ್ಟಡ ಭಾಗಗಳನ್ನು ತೆರವುಗೊಳಿಸುವುದು ಖಚಿತವಾಗಿದೆ. ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಮಂತ್ರಿಮಾಲ್ ಹಾಗೂ ಮಂತ್ರಿ ಗ್ರೀನ್ ಅಪಾರ್ಟ್‍ಮೆಂಟ್ ಕಟ್ಟಡಗಳನ್ನು ತೆರವುಗೊಳಿಸಿ ವಶಪಡಿಸಿಕೊಳ್ಳುವಂತೆ ಸಕ್ಷಮ ಪ್ರಾಧಿಕಾರದ ನ್ಯಾಯಾಲಯ ಹೊರಡಿಸಿರುವ ಮಹತ್ವದ ಆದೇಶಕ್ಕೆ ತಡೆ ಕೋರಿ ಮಂತ್ರಿ ಗ್ರೂಪ್‍ನವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ನಮ್ಮ ವಾದವನ್ನು ಆಲಿಸಬೇಕೆಂದು ಬಿಬಿಎಂಪಿ ಕಾನೂನು ಘಟಕ ಕೆವಿಯಟ್ ಸಲ್ಲಿಸಿದೆ.

ಬಿಬಿಎಂಪಿ ಈ ಕ್ರಮ ಕೈಗೊಂಡಿರುವುದನ್ನು ಗಮನಿಸಿದರೆ ಸರ್ಕಾರಿ ಸ್ವತ್ತನ್ನು ವಶಪಡಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಕೈಗಾರಿಕಾ ವಲಯಕ್ಕೆ ಮೀಸಲಿಟ್ಟಿದ್ದ ಈ ಸ್ಥಳವನ್ನು ವಸತಿ ಪ್ರದೇಶಕ್ಕೆ ಪರಿವರ್ತನೆ ಮಾಡಿ ಅಲ್ಲಿ ಬೃಹತ್ ಅಪಾರ್ಟ್‍ಮೆಂಟ್ ನಿರ್ಮಿಸಲಾಗಿತ್ತು.  ಸುಮಾರು 400 ಕೋಟಿ ಮೌಲ್ಯದ 4.28 ಎಕರೆ ಪ್ರದೇಶದ ಈ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ನ್ಯಾಯಾಲಯ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿತ್ತು.

ಹನುಮಂತಪುರ ಗ್ರಾಮದ ಸರ್ವೇ ನಂ.56ರಲ್ಲಿ 37 ಕುಂಟೆ ಕೆರೆಪ್ರದೇಶ ಹಾಗೂ 3.31 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಕಾನೂನು ಬಾಹಿರ ಕಟ್ಟಡಗಳನ್ನು ತೆರವುಗೊಳಿಸಿ ಕೂಡಲೆ ಈ ಸ್ವತ್ತನ್ನು ವಶಪಡಿಸಿಕೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ಸಕ್ಷಮ ಪ್ರಾಧಿಕಾರದ ಬೆಂಗಳೂರು ವಿಭಾಗದ ನ್ಯಾಯಾಧೀಶರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಇದಕ್ಕೆ ತಡೆ ಕೋರಿ ಮಂತ್ರಿಮಹಲ್‍ನವರು ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿರುವುದರಿಂದ ಬಿಬಿಎಂಪಿ ಕೆವಿಯಟ್ ಸಲ್ಲಿಸಿದೆ.

ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ರಾಜಮಿಲ್ ಇದ್ದ ಸ್ಥಳದಲ್ಲೇ ಮಂತ್ರಿ ಮಾಲ್ ಯಶವಂತಪುರ ರಸ್ತೆಯ ಕಿರ್ಲೋಸ್ಕರ್ ಕಾರ್ಖಾನೆಯಿದ್ದ ಸ್ಥಳದಲ್ಲಿ ಓರಾಯನ್ ಮಾಲ್, ಸುಜಾತ ಚಿತ್ರಮಂದಿರ ಎದುರಿನ ಮಿನರ್ವ ಮಿಲ್ ಪ್ರದೇಶದಲ್ಲಿ ಶೋಭಾ ಅಪಾರ್ಟ್‍ಮೆಂಟ್ ನಿರ್ಮಿಸಲಾಗುತ್ತಿದ್ದು,  ಕೈಗಾರಿಕಾ ಪ್ರದೇಶಗಳನ್ನು ವಸತಿ ಪ್ರದೇಶಗಳನ್ನಾಗಿ ಅಥವಾ ವಸತಿ ಪ್ರದೇಶಗಳನ್ನು ಕೈಗಾರಿಕಾ ಪ್ರದೇಶಗಳನ್ನಾಗಿ ಭೂ ಪರಿವರ್ತನೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶವಾಗಿದ್ದರೂ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಬಿಬಿಎಂಪಿ ಆಯುಕ್ತರಿಗೆ ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಜಂಟಿ ಸರ್ವೆಗೆ ಆದೇಶ ಮಾಡಲಾಗಿತ್ತು.

ಈ ಪ್ರಕರಣ ಕುರಿತಂತೆ ಸುದೀರ್ಘ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು, ಸಕ್ಷಮ ಪ್ರಾಧಿಕಾರದ ನ್ಯಾಯಾಲಯದ ನ್ಯಾಯಾಧೀಶರು, ಒತ್ತುವರಿ ಸ್ವತ್ತನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಿದ್ದರು.

Facebook Comments