ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲರು ಖತಂ

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ, ನ.22-ಬಿಹಾರದ ಗಯಾ ಜಿಲ್ಲೆಯಲ್ಲಿ ಕಳೆದ ತಡರಾತ್ರಿ ಭದ್ರತಾ ಪಡೆಗಳ ಜತೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ. ಮೃತ ನಕ್ಸಲರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಬಿಹಾರ ರಾಜಧಾನಿ ಪಾಟ್ನಾದಿಂದ 100 ಕಿ.ಮೀ. ದೂರದಲ್ಲಿರುವ ಗಯಾದ ಬಾರಚೆಟ್ಟಿ ಅರಣ್ಯ ಪ್ರದೇಶದಲ್ಲಿ ನಿನ್ನೆ ಮಧ್ಯರಾತ್ರಿ ಯೋಧರು ಮತ್ತು ಮಾವೋವಾದಿಗಳ ನಡುವೆ ಆರಂಭವಾದ ಎನ್‍ಕೌಂಟರ್ ಇಂದು ನಸುಕಿನಲ್ಲಿ ಕೊನೆಗೊಂಡಿತು.

ಗುಂಡಿನ ಕಾಳಗದಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ವಲಯ ಕಮಾಂಡರ್ ಅಲೋಕ್ ಯಾದವ್ ಸೇರಿದಂತೆ ಮೂವರು ನಕ್ಸಲರ ಶವಗಳನ್ನು ಸ್ಥಳದಿಂದ ತೆಗೆಯಲಾಗಿದೆ.  ಹತರಾದ ನಕ್ಸಲರ ಬಳಿ ಇದ್ದ ಎಕೆ-47 ರೈಫಲ್, ಇನ್ಸಾಸ್ ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಕೊಳ್ಳಲಾಗಿದೆ.

ಅರಣ್ಯ ಪ್ರದೇಶದಲ್ಲಿ ನಕ್ಸಲರು ಅವಿತಿಟ್ಟುಕೊಂಡಿರುವ ಖಚಿತ ಸುಳಿವಿನ ಮೇರೆಗೆ ರಾಜ್ಯ ಮೀಸಲು ಪೊಲೀಸ್ ಪಡೆ ಮತ್ತು ಕೋಬ್ರಾ ಪಡೆಯ 205ನೇ ಬೆಟಾಲಿಯನ್ ಸಿಬ್ಬಂದಿ ಆ ಪ್ರದೇಶವನ್ನು ಸುತ್ತುವರಿದು ಶೋಧ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಮಾವೋವಾದಿಗಳು ಭದ್ರತಾ ಪಡೆಗಳ ಂಏಲೆ ಗುಂಡು ಹಾರಿಸಿದರು.

ಈ ಸಂದರ್ಭದಲ್ಲಿ ಕೆಲವು ಗಂಟೆಗಳ ಕಾಲ ಭೀಕರ ಗುಂಡಿನ ಕಾಳಗ ನಡೆದು ಮೂವರು ನಕ್ಸಲರು ಹತರಾದರು.  ಗುಂಡಿನ ಕಾಳಗದ ವೇಳೆ ಪರಾರಿಯಾಗಿರುವ ಮಾವೋವಾದಿಗಳಿಗಾಗಿ ತೀವ್ರ ಶೋಧ ಮುಂದುವರಿದಿದೆ.

Facebook Comments