ತಪ್ಪಿತು ಸುಳ್ವಾಡಿ ಮಾದರಿ ಅನಾಹುತ, ಪ್ರಸಾದ ಸೇವಿಸಿ 75ಕ್ಕೂ ಹೆಚ್ಚು ಜನ ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಅ.29- ಚಾಮರಾಜನಗರದ ಸುಳ್ವಾಡಿ ಗ್ರಾಮದ ಕಿಚ್ಗುತ್ತಿ ಮಾರಮ್ಮನ ದೇವಸ್ಥಾನದ ವಿಷ ಪ್ರಸಾದ ಸೇವನೆ ಪ್ರಕರಣ ಮಾಸುವ ಮುನ್ನವೇ ತಾಲ್ಲೂಕಿನ ಹಲಗೂರು ಹೋಬಳಿಯ ಲಿಂಗಪಟ್ಟಣ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಅಂತಹದ್ದೇ ಘಟನೆ ನಡೆದಿದೆ.

ಮಾರಮ್ಮ ದೇವಾಲಯದಲ್ಲಿ ಪೂಜೆ ನಂತರ ನೀಡಿದ ಪ್ರಸಾದ ಸೇವಿಸಿ ಸುಮಾರು 75ಕ್ಕೂ ಹೆಚ್ಚು ಭಕ್ತರಿಗೆ ವಾಂತಿ-ಬೇಧಿಯಾಗಿ ಅಸ್ವಸ್ಥಗೊಂಡವರನ್ನು ರಾತ್ರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ವೈದ್ಯರು ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪ್ರಸಾದ ಸೇವಿಸಿದ ಎಲ್ಲರನ್ನೂ ಪರೀಕ್ಷೆ ನಡೆಸ್ದಿ ಚಿಕಿತ್ಸೆಗೆ ಮುಂದಾಗಿದ್ದಾರೆ.

ಊರಿನ ಮುಖಂಡರೊಬ್ಬರು ರಾತ್ರಿ ಮಾರಮ್ಮನ ದೇವಾಲಯದಲ್ಲಿ ಪೂಜೆ ಮಾಡಿಸಿ ಬಂದ ಭಕ್ತರಿಗೆ ಪ್ರಸಾದ ರೂಪದಲ್ಲಿ ಪುಳಿಯೋಗರೆ ಮಾಡಿ ವಿತರಿಸಲಾಗಿತ್ತು ಎಂದು ತಿಳಿದುಬಂದಿದ್ದು 100ಕ್ಕೂ ಹೆಚ್ಚು ಮಂದಿ ಪ್ರಸಾದ ಸೇವಿದ್ದರು.

ರಾತ್ರಿ ಅವರಿಗೆ ವಾಂತಿ, ಬೇಧಿ ಕಾಣಿಸಿಕೊಂಡು ಹಲಗೂರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಬೆಳಗ್ಗೆ ಮತ್ತಷ್ಟು ಜನರಿಗೆ ವಾಂತಿ, ಬೇಧಿ ಕಾಣಿಸಿಕೊಂಡು ಅವರೆಲ್ಲರೂ ಹಲಗೂರು ಆಸ್ಪತ್ರೆಗೆ ಬಂದಿದ್ದಾರೆ. ಒಂದೇ ಊರಿನ ಜನರು ಅಸ್ವಸ್ಥಗೊಂಡಿದ್ದನ್ನು ಕಂಡ ವೈದ್ಯರು ತಕ್ಷಣ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಊರಿನ ಶಾಲೆ ಆವರಣದಲ್ಲಿ ಚಿಕಿತ್ಸೆ ನೀಡಿದ್ದು, ಬಹುತೇಕರು ಚೇತರಿಸಿಕೊಂಡಿದ್ದಾರೆ. ನಾಲ್ವರನ್ನು ಮಳವಳ್ಳಿ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮದ ಪರಿಸ್ಥಿತಿ ಬಗ್ಗೆ ತಿಳಿದು ಸ್ಥಳಕ್ಕೆ ಡಿಹೆಚ್‍ಒ ಮಂಚೇಗೌಡ, ಎಸ್‍ಪಿ ಪರಶುರಾಮ, ಡಿವೈಎಸ್‍ಪಿ ಪೃಥ್ವಿ, ಸಿಪಿಐ ಶಿವಮಲ್ಲಯ್ಯ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಗ್ರಾಮದಲ್ಲಿ ದೇವರ ಪ್ರಸಾದ ತಯಾರಿಕೆ ಮಾಡುವಾಗ ಫುಡ್ ಪಾಯಿಸನ್ ಆಗಿರುವ ಶಂಕೆ ಮೇರೆಗೆ ತಯಾರಿಸಿದ್ದ ಪ್ರಸಾದ ಹಾಗೂ ನೀರನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಬಹುತೇಕರು ಚೇತರಿಸಿಕೊಂಡಿದ್ದು, ಪರಿಸ್ಥಿತಿ ನಿಯಂತ್ರದಲ್ಲಿದ್ದು, ಯಾವುದೇ ಆತಂಕವಿಲ್ಲವೆಂದು ಡಿಹೆಚ್‍ಒ ತಿಳಿಸಿದ್ದಾರೆ.

ಪ್ರಯೋಗಾಲಯದ ವರದಿ ಬಂದ ಬಳಿಕ ಇದಕ್ಕೆ ಕಾರಣವೇನೆಂದು ತಿಳಿಯಲಿದೆ. ಗ್ರಾಮದಲ್ಲಿ ನಡೆದ ಈ ಘಟನೆಯಿಂದಾಗಿ ಇಡೀ ಗ್ರಾಮದ ಜನರು ಆತಂಕಗೊಂಡಿದ್ದಾರೆ. ಸದ್ಯ ಯಾವುದೇ ಅನಾಹುತ ಆಗಿಲ್ಲವಾದರೂ ಆರೋಗ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರ ವಹಿಸಿ ಗ್ರಾಮದಲ್ಲೇ ಬೀಡು ಬಿಟ್ಟು ಅಸ್ವಸ್ಥರಿಗೆ ಚಿಕಿತ್ಸೆ ನೀಡಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ.

Facebook Comments