ಆಪರೇಷನ್ ಕಮಲಕ್ಕೆ ಸಿಲುಕಿದವರು ಸಿದ್ದರಾಮಯ್ಯ ಕರೆದರೆ ವಾಪಸ್ ಬರ್ತಾರೆ : ಮಾರ್ಗರೇಟ್ ಆಳ್ವಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.27-ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋದವರು ಅಲ್ಲಿ ಎಷ್ಟು ದಿನ ಇರ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಯಾವಾಗ ಕರೀತಾರೋ ಆಗ ವಾಪಸ್ ಬರ್ತಾರೆ ಎಂದು ಕೇಂದ್ರ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಹೇಳುವ ಮೂಲಕ ತೀವ್ರ ಕುತೂಹಲ ಹುಟ್ಟುಹಾಕಿದ್ದಾರೆ.

ನಗರದ ಕಾಸಿಯಾ ಭವನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಸಂವಿಧಾನ ಕುರಿತು ಮಹಿಳಾ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆಯಾಗಿದ್ದು, ಸಿದ್ದರಾಮಯ್ಯ ಅವರಿಗೆ ಬಹಳ ಚೆನ್ನಾಗಿ ಗೊತ್ತಿದೆ. ಅವರು ಕರೆದರೆ ಬಿಜೆಪಿಗೆ ಹೋಗಿರುವ ಶಾಸಕರು ಮತ್ತೆ ವಾಪಸ್ ಬರ್ತಾರೆ ಎಂದು ಹೇಳಿ ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಅವರತ್ತ ನೋಡಿ ಕುತೂಹಲ ಕೆರಳಿಸಿದ್ದರು.

ಮುಂದುವರೆದು ಮಾತನಾಡಿದ ಅವರು, ಸಿಎಎ, ಎನ್‍ಆರ್‍ಸಿ ಹಿಂದೂ-ಮುಸ್ಲಿಮರ ನಡುವಿನ ಹೋರಾಟ ಅಲ್ಲ. ಈ ಕಾನೂನುಗಳಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ನಾವು ಈ ದೇಶದ ಪ್ರಜೆಗಳು 70 ವರ್ಷದಿಂದಲೇ ಇಲ್ಲೇ ವಾಸವಿದ್ದೇವೆ ಎಂದು ಸಾಬೀತುಪಡಿಸುವ ಅಗತ್ಯ ಇಲ್ಲ. ಇದಕ್ಕೆಲ್ಲ ದಾಖಲೆಗಳನ್ನು ಎಲ್ಲಿಂದ ತರುವುದು? ಒಂದು ವೇಳೆ ನನ್ನನ್ನು ದಾಖಲಾತಿ ಕೇಳಿ ಯಾರಾದರೂ ಪ್ರಶ್ನೆ ಮಾಡಿದರೆ ಅವರ ಬಳಿ ಇರುವ ಪೇಪರ್‍ನ್ನು ಹರಿದುಹಾಕುತ್ತೇನೆ ಎಂದರು.

ದೇಶದ ಪೌರರಲ್ಲ ಎಂದು ಸಾಬೀತಾದವರನ್ನು ಎಲ್ಲಿಗೆ ಕಳುಹಿಸುತ್ತೀರಿ? ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಶೇ.31ರಷ್ಟು ಮಾತ್ರ ಮತ ಸಿಕ್ಕಿದೆ. ಇದರಲ್ಲಿ ಹೆಚ್ಚು ಜನ ಸಂಸದರು ಗೆದ್ದಿದ್ದಾರೆ. ಆದರೆ ಎಲ್ಲರೂ ಬಿಜೆಪಿ ಬೆಂಬಲಿಸಿಲ್ಲ. ಹಾಗೆ ನೋಡಿದರೆ ಮೋದಿಯವರದು ಅಲ್ಪಮತದ ಬೆಂಬಲವಿರುವ ಸರ್ಕಾರ ಎಂದು ಹೇಳಿದರು. ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಸಹಬಾಳ್ವೆ ಇರಬೇಕು ಎಂಬ ಕಾರಣಕ್ಕಾಗಿ ಸಂವಿಧಾನ ರಚನೆಯಾಗಿದೆ.

ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಅದಕ್ಕೆ ಸಂಪೂರ್ಣ ತದ್ವಿರುದ್ಧ. ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ ಎಂದು ಹೇಳುತ್ತೇವೆ. ಆದರೆ ಅಲ್ಲಿಂದ ಬರುವವರಿಗೆ ಪೌರತ್ವ ನೀಡುತ್ತೇವೆ. ಈ ರೀತಿಯ ದ್ವಂದ್ವಗಳಿಂದ ವಿಶ್ವಮಟ್ಟದಲ್ಲಿ ನಮ್ಮ ಘನತೆ ಕುಂದಲಿದೆ ಎಂದು ಹೇಳಿದರು. ಕಾಯ್ದೆಯನ್ನು ವಿರೋಧಿಸಿ ಧರ್ಮಾತೀತವಾದ ಹೋರಾಟ ನಡೆಯುತ್ತಿದೆ.ಹಿಂದೂಗಳು ಕೂಡ ಹೋರಾಟಕ್ಕಿಳಿದಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮುಖಂಡರಾದ ಮಂಜುಳಾ ನಾಯ್ಡು, ಸಲೀಂ ಅಹಮ್ಮದ್, ವಿ.ಎಸ್.ಉಗ್ರಪ್ಪ, ಐವಾನ್ ಡಿಸೋಜಾ, ವಿಚಾರವಾದಿ ಶಿವಶಂಕರ್ ಮತ್ತಿತರರು ಹಾಜರಿದ್ದರು.

Facebook Comments