ಮಾರ್ಕಂಡೇಯ ಜಲಾಶಯ : ಕರ್ನಾಟಕದ ಅಫಿಡೆವಿಟ್‍ಗೆ ತಮಿಳುನಾಡು ತಗಾದೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.10-ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ನಗರ ಪಟ್ಟಣಗಳಿಗೆ ನೀರು ಪೂರೈಸುವ ಮಾರ್ಕಂಡೇಯ ಅಣೆಕಟ್ಟಿಗೆ ಕ್ಯಾತೆ ತೆಗೆದಿರುವ ತಮಿಳುನಾಡು ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಅಫಿಡೆವಿಟ್‍ಗೆ ಪ್ರತಿಯಾಗಿ ಇಂದು ಆ ರಾಜ್ಯ ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದೆ.  ತಮಿಳುನಾಡಿನ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಪೀಠವು ಕೆಲವು ಮಾಹಿತಿಗಳನ್ನು ಕೇಳಿತ್ತು.

ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ತನಗೆ ಕಾಲಾವಕಾಶ ನೀಡಬೇಕೆಂದು ತಮಿಳುನಾಡು ಪರ ವಕೀಲರು ಸರ್ವೋನ್ನತ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಮೂರು ವಾರಗಳೊಳಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ತಮಿಳುನಾಡಿಗೆ ಸೂಚನೆ ನೀಡಿ ಅಲ್ಲಿಯವರೆಗೆ ವಿಚಾರಣೆಯನ್ನು ಮುಂದೂಡಿತು.

ಮಾರ್ಕಂಡೇಯ ಡ್ಯಾಂ ನಿರ್ಮಾಣ ತಡೆ ಕೋರಿ ತಮಿಳುನಾಡು ಈಗಾಗಲೇ ಸಲ್ಲಿಸಿರುವ ಆಕ್ಷೇಪಣಾ ಅರ್ಜಿಯನ್ನು ತಿರಸ್ಕರಿಸಬೇಕು ಮತ್ತು ಅಣೆಕಟ್ಟು ಕಾಮಗಾರಿ ಮುಂದುವರೆಸಲು ಅನುವು ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರ ಸರ್ವೋನ್ನತ ನ್ಯಾಯಾಲಯದಲ್ಲಿ ಕಳೆದ ವಾರ ಮನವಿ ಮಾಡಿತ್ತು. 240 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಡ್ಯಾಂನ ಕಾಮಗಾರಿ ಶೇ.85ರಷ್ಟು ಪೂರ್ಣಗೊಂಡಿದೆ.

ಇದಕ್ಕಾಗಿ ಈಗಾಗಲೇ 210 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ತಮಿಳುನಾಡು ಸಲ್ಲಿಸಿರುವ ಆಕ್ಷೇಪಣೆ ಅರ್ಜಿಯನ್ನು ಪರಿಗಣಿಸಿ ಈ ಯೋಜನೆಗೆ ತಡೆ ನೀಡಿದ್ದೇ ಆದರೆ ರಾಜ್ಯಕ್ಕೆ ಇದರಿಂದ ಭಾರೀ ತೊಂದರೆ ಮತ್ತು ಹಣ ಹೂಡಿಕೆ ವ್ಯರ್ಥವಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರಮಾಣ ಪತ್ರದಲ್ಲಿ ತಿಳಿಸಿದೆ. ಮಾರ್ಕಂಡೇಯ ಡ್ಯಾಂ ಕುರಿತು ತಮಿಳುನಾಡು ಎತ್ತಿರುವ ಆಕ್ಷೇಪ ಸಂಬಂಧ ನ್ಯಾಯಾಧೀಕರಣ ಸ್ಥಾಪಿಸುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ರಾಜ್ಯವು ತಮಿಳುನಾಡಿನ ದಕ್ಷಿಣ ಪೆನ್ನಾರ್ ನದಿಯ ಸ್ವಾಭಾವಿಕ ಅರಿವನ್ನು ಬಳಸಿಕೊಂಡಿಲ್ಲ. ಹೀಗಾಗಿ ಆ ರಾಜ್ಯ ಈ ವಿಷಯದಲ್ಲಿ ತಗಾದೆ ತೆಗೆದಿರುವುದು ನ್ಯಾಯ ಸಮ್ಮತವಲ್ಲ ಎಂದು ಪ್ರಮಾಣಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.  ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳು ಹಾಗೂ ಇವುಗಳ ವ್ಯಾಪ್ತಿಯಲ್ಲಿರುವ 45 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 2009ರಿಂದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಿಸಲಾಗುತ್ತಿದೆ.

Facebook Comments