ಮಾನವೀಯತೆ ಮೆರೆದ ಶಾಸಕ ಮಸಾಲೆ ಜಯರಾಮ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ನ.26- ಬೈಕ್ ಅಪಘಾತದಲ್ಲಿ ರಸ್ತೆಗೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ದಂಪತಿ ನೆರವಿಗೆ ಧಾವಿಸಿ ಶಾಸಕ ಮಸಾಲೆ ಜಯರಾಮ್ ಮಾನವೀಯತೆ ಮೆರೆದಿದ್ದಾರೆ.
ಬೆಳಗ್ಗೆ ತುರುವೇಕೆರೆ-ದಬ್ಬೆಘಟ್ಟ ರಸ್ತೆ ಸೂಳೆಕೆರೆ ಬಳಿ ಬೈಕ್‍ನಲ್ಲಿ ಹೋಗುತ್ತಿದ್ದ ದಂಪತಿ ಸ್ವಯಂ ಅಪಘಾತದಿಂದ ರಸ್ತೆಗೆ ಬಿದ್ದು ಒದ್ದಾಡುತ್ತಿದ್ದರು.

ಇದೇ ಮಾರ್ಗವಾಗಿ ಬರುತ್ತಿದ್ದ ಶಾಸಕ ಮಸಾಲೆ ಜಯರಾಮ್ ತಕ್ಷಣ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳನ್ನು ಸಮಾಧಾನಪಡಿಸಿ ನೀರು ಕುಡಿಸಿ ತಮ್ಮ ವಾಹನದಲ್ಲಿದ್ದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಿಂದ ಔಷಧಿಗಳನ್ನು ತಂದು ತಮಗೆ ತಿಳಿದ ಹಾಗೆ ಉಪಚಾರ ಮಾಡಿದರು.

ನಂತರ ಆಂಬ್ಯುಲೆನ್ಸ್‍ಗೆ ಕರೆ ಮಾಡಿ ಅದರಲ್ಲಿ ಗಾಯಗೊಂಡಿದ್ದ ರಂಗಪ್ಪ-ಪಂಕಜಮ್ಮ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ತೋರಿದರು. ಶಾಸಕರ ಮಾನವೀಯತೆಯನ್ನು ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.ಅವರು ದಾಖಲಾಗುತ್ತಿದ್ದ ಆಸ್ಪತ್ರೆ ವೈದ್ಯರಿಗೂ ದೂರವಾಣಿ ಕರೆ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಪಘಾತವಾದಾಗ ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸುವರೆ ಹೊರತು ಜನ ನೆರವಿಗೆ ಧಾವಿಸುವುದಿಲ್ಲ. ಅಂತಹುದರಲ್ಲಿ ಶಾಸಕರು ದಂಪತಿಗೆ ಸ್ವತಹ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಿರುವುದು ಎಲ್ಲರಿಗೂ ಮಾದಿಯಾಗಿದೆ.

Facebook Comments