ಕಾಶ್ಮೀರದಲ್ಲಿ ಶಾಂತಿ ಕದಡಲು ಉಗ್ರ ಮಸೂದ್ ಛೂ ಬಿಟ್ಟ ‘ಪಾಪಿ’ಸ್ತಾನ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.9- ಆರ್ಕಿಟಿಕಲ್ 370 ರದ್ಧಾಗಿರುವ ಕಾಶ್ಮೀರದಲ್ಲಿ ಶಾಂತಿ ಕದಡಲು ಮತ್ತು ಉಗ್ರರ ದಾಳಿಗಳನ್ನು ನಡೆಸಲು ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಮತ್ತೊಂದು ಅಪಾಯಕಾರಿ ಕುತಂತ್ರ ಬಯಲಾಗಿದೆ.  ಕುಖ್ಯಾತ ಭಯೋತ್ಪಾದಕ ಮತ್ತು ಜೈಷ್-ಎ-ಮಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‍ನನ್ನು ಇದೇ ಕಾರಣಕ್ಕಾಗಿ ಪಾಕಿಸ್ತಾನ ಜೈಲಿನಿಂದ ರಹಸ್ಯವಾಗಿ ಬಿಡುಗಡೆ ಮಾಡಿ ಕಣಿವೆ ಪ್ರಾಂತ್ಯದಲ್ಲಿ ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲು ಕುಮ್ಮಕ್ಕು ನೀಡಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಇದಲ್ಲದೆ, ಪಾಕಿಸ್ತಾನಿ ಸೇನೆ ಜಮ್ಮು-ಕಾಶ್ಮೀರದ ಸಿಯಾಲ್‍ಕೋಟ್ ಮತ್ತು ಪಂಜಾಬ್‍ನ ಗಡಿವಲಯಗಳಲ್ಲಿ ಭಾರೀ ದಾಳಿ ನಡೆಸಲು ಸಹ ಹುನ್ನಾರ ನಡೆಸಿದೆ ಎಂಬ ವರ್ತಮಾನ ಲಭಿಸಿದೆ. ಈ ಎರಡು ಗಂಭೀರ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಕಾಶ್ಮೀರ ಮತ್ತು ಪಂಜಾಬ್ ಗಡಿಪ್ರದೇಶಗಳು ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಭಾರತೀಯ ಸೇನೆಯನ್ನು ಯಾವುದೇ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧಗೊಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿದ್ದ ಭಾರತೀಯ ಸಂವಿಧಾನದ 370ನೇ ವಿಧಿ ರದ್ಧತಿ ನಂತರ ಕುಪಿತಗೊಂಡಿರುವ ಪಾಕಿಸ್ತಾನ ತನ್ನ ಕುತಂತ್ರ ಹುನ್ನಾರವನ್ನು ಮತ್ತಷ್ಟು ತೀವ್ರಗೊಳಿಸಿದೆ. ಫೆಬ್ರವರಿ 14ರಂದು ಪುಲ್ವಾಮ್‍ದಲ್ಲಿ ಬಾಂಬ್ ದಾಳಿ ಮೂಲಕ 40ಕ್ಕೂ ಹೆಚ್ಚು ಯೋಧರು ಹತರಾದ ನಂತರ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿದ್ದ ಪಾಕಿಸ್ತಾನ ಜೈಷ್ ಮುಖ್ಯಸ್ಥ ಅಜರ್‍ನನ್ನು ನೆಪ ಮಾತ್ರಕ್ಕೆ ಬಂಧನದಲ್ಲಿರಿಸಿತ್ತು.

ಆರ್ಟಿಕಲ್ 370ರದ್ದಾಗುತ್ತಿದ್ದಂತೆ ಕಾಶ್ಮೀರದಲ್ಲಿ ಹಿಂಸಾಕೃತ್ಯಗಳನ್ನು ಎಸೆಗಲು ಸಮಯ ಸಾಧಿಸುತ್ತಿರುವ ಪಾಕಿಸ್ತಾನ ಉಗ್ರಗಾಮಿಗಳಿಗೆ ದಾಳಿಗಳನ್ನು ನಡೆಸಲು ಪ್ರಚೋದನೆ ನೀಡುತ್ತಿದೆ.  ಈಗ ಇನ್ನೂ ಒಂದು ಹೆಜ್ಜೆ ಮುಂದುವರೆದಿರುವ ಪಾಕಿಸ್ತಾನ ಅಜರ್‍ನನ್ನು ಜೈಲಿನಿಂದ ರಹಸ್ಯವಾಗಿ ಬಿಡುಗಡೆ ಮಾಡಿ ಕಣಿವೆ ಪ್ರಾಂತ್ಯದಲ್ಲಿ ಭಾರೀ ವಿಧ್ವಂಸಕ ದಾಳಿಗಳನ್ನು ನಡೆಸಲು ಸೂಚನೆ ನೀಡಿ ಇತರ ಉಗ್ರಗಾಮಿ ಸಂಘಟನೆಗಳ ನೆರವು ಪಡೆಯುವಂತೆಯೂ ತಿಳಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಒಂದೆಡೆ ಉಗ್ರರನ್ನು ಭಾರತದ ಗಡಿಪ್ರಾಂತ್ಯದ ಮೇಲೆ ಛೂ ಬಿಟ್ಟಿರುವ ಪಾಕಿಸ್ತಾನ ಮತ್ತೊಂದೆಡೆ ಕಣಿವೆ ಪ್ರಾಂತ್ಯವಲ್ಲದೆ ಪಂಜಾಬ್ ಮತ್ತು ಗುಜರಾತ್ ರಾಜ್ಯಗಳ ಗಡಿಪ್ರದೇಶದಲ್ಲಿ ತನ್ನ ಸೇನೆ ಜಮಾವಣೆಯನ್ನು ಹೆಚ್ಚಿಸಿದೆ.  ಪಾಕಿಸ್ತಾನ ಪ್ರಧಾನಿ ಇಮ್ರಾನ್‍ಖಾನ್ ಮೊನ್ನೆಯಷ್ಟೆ ಭಾರತದ ವಿರುದ್ಧ ಪೂರ್ಣಪ್ರಮಾಣದ ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂದು ಗೊಡ್ಡು ಬೆದರಿಕೆ ಹಾಕಿದ್ದರು.

ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಯೋತ್ಪಾದಕರು ಮತ್ತು ಅವರಿಗೆ ಕುಮ್ಮಕ್ಕು ನೀಡುತ್ತಾ ಗಡಿಪ್ರದೇಶದಲ್ಲಿ ಜಮಾವಣೆ ಹೆಚ್ಚಿಸುತ್ತಿರುವ ಪಾಕ್ ಸೇನೆಗೆ ತಕ್ಕ ಶಾಸ್ತಿ ಮಾಡಲು ಭಾರತೀಯ ಯೋಧರು ಸರ್ವರೀತಿಯಲ್ಲೂ ಸಜ್ಜಾಗಿದ್ದಾರೆ.

Facebook Comments