ಸುಡುಗಾಡಗುತ್ತಿದೆ ಸಿಲಿಕಾನ್ ಸಿಟಿ, 26 ಶವಗಳ ಸಾಮೂಹಿಕ ದಹನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.30-ನಗರದಲ್ಲಿ ಕೊರೊನಾ ಸೋಂಕು ಮಿತಿ ಮೀರುತ್ತಿದೆ. ದಿನೆ ದಿನೇ ಸೋಂಕಿಗೆ ನೂರಾರು ಮಂದಿ ಬಲಿಯಾಗುತ್ತಿದ್ದು ಸಿಲಿಕಾನ್ ಸಿಟಿ ಸುಡುಗಾಡು ಸಿಟಿಯಾಗುತ್ತಿದೆಯೇ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ.
ಸೋಂಕಿನಿಂದ ಪ್ರತಿನಿತ್ಯ ಹಲವಾರು ಮಂದಿ ಇಹಲೋಕ ತ್ಯಜಿಸುತ್ತಿರುವುದರಿಂದ ನಗರದಲ್ಲಿರುವ ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ನಗರದ ಹೊರವಲಯದಲ್ಲಿರುವ ತಾವರೆಕೆರೆ ಸಮೀಪ ತಾತ್ಕಾಲಿಕ ರುದ್ರಭೂಮಿ ಸ್ಥಾಪಿಸಲಾಗಿದ್ದು, ಇಲ್ಲಿ ನೂರಾರು ಶವಗಳ ದಹನ ನಡೆಸಲಾಗುತ್ತಿದೆ.ಇಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ ನಗರದಿಂದ ಬರುವ ಶವಗಳ ಸಾಮೂಹಿಕ ದಹನ ಮಾಡಲಾಗುತ್ತಿದೆ.

ಇಂದು ಒಂದೇ ದಿನ 26 ಶವಗಳನ್ನು ಏಕಕಾಲಕ್ಕೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಶವಗಳ ವಾರಸುದಾರರು ತಮ್ಮ ಕುಟುಂಬದವರು ಸಾಮೂಹಿಕ ದಹನವಾಗುವುದನ್ನು ದೂರದಲ್ಲೇ ನಿಂತು ನೋಡಬೇಕಾದಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ದಿನೇ ದಿನೇ ಸಾವಿನ ಪ್ರಕರಣಗಳು ಹೆಚ್ಚುತ್ತಲೆ ಇದ್ದು ಸಿಲಿಕಾನ್ ಸಿಟಿ ಸುಡುಗಾಡಾಗಿ ಪರಿವರ್ತನೆಯಾಗುತ್ತಿದ್ದರೂ ಜನ ಮಾತ್ರ ಇನ್ನು ಬುದ್ದಿ ಕಲಿತಿಲ್ಲ.

ಹೇ ಹೋಗ್ರಿ ಕೊರೊನಾ ಅನ್ನೋದೆ ಇಲ್ಲ. ಅದೆಲ್ಲಾ ಗಿಮಿಕ್, ಸಾವು ಯಾವಾಗ ಎಂದು ಬ್ರಹ್ಮ ಹಣೇಲಿ ಬರೆದಿರುತ್ತಾನೇ, ಸಾವು ಬಂದರೆ ಯಾರು ತಪ್ಪಿಸೋಕೆ ಆಗಲ್ಲ ಎಂಬ ಉದಾಸೀನದಿಂದ ಕೋವಿಡ್ ನಿಯಮ ಮೀರಿ ಓಡಾಡುತ್ತಿರುವುದೆ ನಗರದ ಇಂದಿನ ನೈಜ ಸ್ಥಿತಿಗೆ ಕಾರಣವಾಗಿದೆ.

ನಮಗೊಂದು ಜೀವನ ರೂಪಿಸಿಕೊಟ್ಟ ತಂದೆ,ತಾಯಿ, ಮನೆಗೆ ಮಹಾಲಕ್ಷ್ಮಿಯಾಗಿ ಬಂದ ಹೆಂಡತಿ, ಮುದ್ದಾದ ಮಕ್ಕಳನ್ನು ಕೊರೊನಾಗೆ ಬಲಿಕೊಟ್ಟು ನರಳುತ್ತಿರುವವರ ಸಂಖ್ಯೆಗೆನೂ ಕಮ್ಮಿಯಿಲ್ಲ. ಇಂತಹ ಪರಿಸ್ಥಿತಿ ಯಾರಿಗೂ ಬರಬೇಡ ಎಂದರೆ ಕಡ್ಡಾಯವಾಗಿ ಕೊರೊನಾ ನಿಯಮ ಪಾಲಿಸಿ ಮನೆಯಲ್ಲೇ ನೆಮ್ಮದಿಯಾಗಿ ಕಾಲ ಕಳೆಯುವುದೊಂದೆ ಇರುವ ಏಕೈಕ ಮಾರ್ಗ.

ಈಗಾಗಲೇ ಸಾವಿರಾರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ, ಸತ್ತವರ ಶವಗಳನ್ನು ಸಾಮೂಹಿಕ ದಹನ ಮಾಡುತ್ತಿರುವ ದೃಶ್ಯಗಳನ್ನು ನೋಡಿದರೆ ಕರುಳು ಹಿಂಡಿದಂತಾಗುತ್ತದೆ. ಇಂತಹ ಪರಿಸ್ಥಿತಿಯಿಂದ ಹೊರಬರುವುದು ನಿಮ್ಮ ಕೈಯಲ್ಲೇ ಇದೆ. ಹೀಗಾಗಿ ಸಿಲಿಕಾನ್ ಸಿಟಿ ಜನರೇ ಮನೆ ಬಿಟ್ಟು ಹೊರ ಹೋಗುವ ಮುನ್ನ ಒಮ್ಮೆ ಯೋಚಿಸಿ ನೋಡಿ.

Facebook Comments

Sri Raghav

Admin