ಬಿಗ್ ಬ್ರೇಕಿಂಗ್ : ಹಿರಿಯ ನಟ, ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 2- ಖ್ಯಾತ ಹಿರಿಯ ನಟ, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ (85) ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಮಾತಿನಲ್ಲೇ ಮೋಡಿ ಮಾಡುತ್ತಿದ್ದ ಹಿರಣ್ಣಯ್ಯ ಅವರು ತಮ್ಮ ಪರಿಣಾಮಕಾರಿ ಭಾಷಣ ಶೈಲಿಯಿಂದ ಜನಮನ ಗೆದ್ದಿದ್ದರು. ಭಾಷಣದಲ್ಲಿನ ಮಾತುಗಳಿಂದಲೇ ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಭ್ರಷ್ಟಾಚಾರವನ್ನು ಟೀಕಿಸುತ್ತಿದ್ದರು.

ಹಿರಣ್ಣಯ್ಯ ಅವರು 1934ರ ಫೆಬ್ರವರಿ 15ರಂದು ಮೈಸೂರಿನಲ್ಲಿ ಜನಿಸಿದ್ದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕೆ.ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಯ ಏಕೈಕ ಪುತ್ರರಾಗಿದ್ದರು.

ಅವರು ಓದಿದ್ದು ಇಂಟರ್‍ಮೀಡಿಯಟ್‍ವರೆಗೆ. 1952ರಲ್ಲಿ ತಮ್ಮ ತಂದೆಯೊಂದಿಗೆ ಸೇರಿಕೊಂಡು ರಂಗಶಿಕ್ಷಣವನ್ನು ಪಡೆದುಕೊಂಡರು. ಹಿರಣ್ಣಯ್ಯ ಅವರು ಬಾಲ್ಯದಲ್ಲಿದ್ದಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ಕುಟುಂಬವನ್ನೂ ತಮ್ಮೊಂದಿಗೆ ಕರೆದೊಯ್ದಿದ್ದರು.

ಇದರಿಂದಾಗಿ ತಮಿಳು, ತೆಲುಗು, ಇಂಗ್ಲಿಷ್ ಭಾಷೆಗಳು ಅವರಿಗೆ ಕರಗತವಾದವು. ಮನೆಯಲ್ಲಿ ಕನ್ನಡದ ಬಾಯಿಪಾಠ, ಸಂಸ್ಕøತ ಸ್ತೋತ್ರ ಪಾಠ ಕೂಡ ನಡೆಯುತ್ತಿತ್ತು. ನಂತರ ಮೈಸೂರಿಗೆ ಬಂದ ಅವರು ಅಲ್ಲಿನ ಡಿ.ಬನುಮಯ್ಯ ಮಾಧ್ಯಮಿಕ ಶಾಲೆಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಸಾಧ್ವಿ ಪತ್ರಿಕೆ, ಮೈಸೂರು ಪತ್ರಿಕೆಯನ್ನು ಮನೆ ಮನೆಗೆ ಹಂಚಿ ಅದರಲ್ಲಿ ಬರುತ್ತಿದ್ದ ಹಣದಿಂದ ಪರೀಕ್ಷಾ ಶುಲ್ಕವನ್ನು ಭರಿಸುತ್ತಿದ್ದರು. ಇಂಟರ್ ಮೀಡಿಯೆಟ್ ಓದುವ ಸಲುವಾಗಿ ಶಾರದಾ ವಿಲಾಸ ಕಾಲೇಜಿಗೆ ಸೇರಿ ಅಲ್ಲಿ ಓದನ್ನು ಮುಕ್ತಾಯಗೊಳಿಸಿದರು.

ತಂದೆ ಹಿರಣ್ಣಯ್ಯನವರು ನಿರ್ಮಿಸಿದ ವಾಣಿ ಚಿತ್ರದಲ್ಲಿ ಪಾತ್ರ ವಹಿಸಿದಾಗ ಅವರಿಗೆ ಮಾಸ್ಟರ್ ನರಸಿಂಹಮೂರ್ತಿ ಎಂಬ ಹೆಸರು ಬಂದಿತ್ತು. ನಂತರ ಅವರ ತಂದೆಯಿಂದ ಮಾಸ್ಟರ್ ಹಿರಣ್ಣಯ್ಯ ಎಂಬ ಹೆಸರು ಶಾಶ್ವತವಾಯಿತು.

ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳೆಂದರೆ ಜನ ದೂರದ ಊರುಗಳಿಂದ ಆಗಮಿಸಿ ನಾಟಕ ವೀಕ್ಷಿಸಿ ಆನಂದಿಸುತ್ತಿದ್ದರು. ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ ನಾರಾಯಣ, ಲಂಚಾವತಾರ, ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚೆಮ ನಾಯಕ ನಾಟಕಗಳು ಭಾರೀ ಹೆಸರು ಮಾಡಿದ್ದವು.

ಲಂಚಾವತಾರ ಎಂಬ ನಾಟಕದಿಂದಾಗಿ ಹಿರಣ್ಣಯ್ಯ ಅವರು ರಾಜ್ಯದಲ್ಲಷ್ಟೆ ಅಲ್ಲದೆ ದೇಶದಲ್ಲೇ ಮನೆ ಮಾತಾದರು. ಲಂಚಾವತಾರ ನಾಟಕ 10 ಸಾವಿರ ಪ್ರದರ್ಶನ ಕಂಡು ವಿಶ್ವದಾಖಲೆ ನಿರ್ಮಿಸಿದೆ.

1940ರಲ್ಲಿ ತಂದೆ ನಿರ್ಮಿಸಿದ ವಾಣಿ ಚಿತ್ರದಲ್ಲಿ ಬಾಲನಟನಾಗಿ ಪಾದಾರ್ಪಣೆ ಮಾಡಿ 1948ರಲ್ಲಿ ಚಿಕ್ಕ ಪಾತ್ರ ಮಾಡಿದಾಗ ಅಷ್ಟೇನೂ ಹೆಸರು ಮಾಡಲಾಗಿರಲಿಲ್ಲ. ಆದರೂ ಛಲ ಬಿಡದೆ ಕಾಲೇಜಿನಲ್ಲಿ ಸಂಘ ಕಟ್ಟಿ ಆಗ್ರಹ ಎಂಬ ನಾಟಕವನ್ನು ಅವರು ಪ್ರದರ್ಶಿಸಿದರು.

ನಾಟಕವೂ ಗೆದ್ದಿತು, ಅವರ ಅಭಿನಯಕ್ಕೆ ಎಲ್ಲೆಲ್ಲೂ ಪ್ರಶಂಸೆ ವ್ಯಕ್ತವಾಗಿತ್ತು. ನಾಟಕ ಗೆದ್ದರೂ ತರಗತಿಯಲ್ಲಿ ಅವರು ನಪಾಸಾಗಿದ್ದರು. ತಂದೆ ನಿಧನದ ನಂತರ ಅನಕೃ ಮತ್ತು ಮಿತ್ರರ ಸಹಾಯದಿಂದ ನಾಟಕ ಕಂಪೆನಿಯನ್ನು ಹಿರಣ್ಣಯ್ಯ ಸ್ಥಾಪಿಸಿದರು.

ಅಲ್ಲೂ ನಷ್ಟ ಉಂಟಾಗಿ ಮತ್ತೆ ಹಿರಣ್ಣಯ್ಯ ಮಿತ್ರ ಮಂಡಳಿಯನ್ನು ಪ್ರಾರಂಭಿಸಿದರು. ಅಲ್ಲಿಂದ ಅವರ ನಾಟಕಗಳು ಒಂದಾದ ನಂತರ ಒಂದು ಹಿಟ್ ಆಗುತ್ತಲೇ ಬಂದವು. 1962ರಲ್ಲಿ ಮೈಸೂರು ಮಹಾರಾಜರು ಅವರಿಗೆ ಸನ್ಮಾನ ಮಾಡಿದ್ದರು. ಜತೆಗೆ ನಟ ರತ್ನಾಕರ ಬಿರುದನ್ನು ಪಡೆದುಕೊಂಡರು.

ಜಯಚಾಮರಾಜೇಂದ್ರ ಒಡೆಯರ್ ಅವರ ಸಮ್ಮುಖದಲ್ಲಿ ಮೈಸೂರಿನ ಜಗನ್ಮೋಹನ ಪ್ಯಾಲೆಸ್‍ನಲ್ಲಿ ನಾಟಕ ಪ್ರದರ್ಶಿಸಿ ಭೇಷ್ ಎನಿಸಿಕೊಂಡಿದ್ದರು. ಹಿರಣ್ಣಯ್ಯ ಅವರ ಸಾಧನೆಗೆ ಸಂದ ಪ್ರಶಸ್ತಿಗಳು, ಗೌರವಗಳಿಗೆ ಲೆಕ್ಕವಿಲ್ಲ.

ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ನವರತ್ನ ರಾಮ್ ಪ್ರಶಸ್ತಿಗಳು ಲಭಿಸಿದ್ದು, ನ್ಯೂ ಜೆರ್ಸಿ, ವಾಷಿಂಗ್ಟನ್ ಡಿಸಿ, ಬಾಸ್ಟನ್, ಹೂಸ್ಟನ್, ನ್ಯೂಯಾರ್ಕ್ ಮತ್ತಿತರೆಡೆಯ ಸನ್ಮಾನಗಳು ಕೂಡ ಅವರಿಗೆ ಸಂದಿವೆ.

ಕಲಾಗಜಸಿಂಹ ಮತ್ತು ನಟ ರತ್ನಾಕರ ಬಿರುದುಗಳು ಸಂದಿವೆ. ಚಲನಚಿತ್ರ ಕ್ಷೇತ್ರದಲ್ಲೂ ತಮ್ಮ ಅಭಿನಯ ಚಾತುರ್ಯದಿಂದ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದು. ಆನಂದ ಸಾಗರ, ಗಜ, ರೇ, ಶಾಂತಿ ನಿವಾಸ ಚಿತ್ರಗಳಲ್ಲಿ ನಟಿಸಿದ್ದರು. ಹಿರಣ್ಣಯ್ಯ ಅವರು ಪತ್ನಿ ಹಾಗೂ ಐವರು ಮಕ್ಕಳು, ಅಪಾರ ಬಂಧುವರ್ಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin