ಕಾಲನ ಕರೆಗೆ ಓಗೊಟ್ಟ ‘ಕಲ್ಚರಲ್ ಕಮೆಡಿಯನ್’

ಈ ಸುದ್ದಿಯನ್ನು ಶೇರ್ ಮಾಡಿ

ಕನ್ನಡದ ವೃತ್ತಿ ರಂಗಭೂಮಿ ಕಂಡ ಶ್ರೇಷ್ಠ ವಿಡಂಬನಕಾರ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ. ವೃತ್ತಿ ರಂಗಭೂಮಿಗೆ ಕ್ರಾಂತಿಕಾರಿ ಬದಲಾವಣೆ ತಂದ ಕೀರ್ತಿ ಇವರದು. ಶ್ರೇಷ್ಠ ವಾಗ್ಮಿಯಾಗಿದ್ದ ಇವರು ಒಳ್ಳೆಯ ಬರಹಗಾರರೂ ಆಗಿದ್ದರು.

ಪ್ರಚಲಿತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅವರು, ಅದನ್ನೇ ಆಧಾರವಾಗಿಟ್ಟುಕೊಂಡು ನಾಟಕ ರಚನೆ ಮಾಡುತ್ತಿದ್ದರು. ಈ ಕಾರಣದಿಂದ ಇವರ ನಾಟಕಗಳು ಜನಸಾಮಾನ್ಯರಿಗೆ ಬಹಳ ಹತ್ತಿರವಾಗಿದ್ದವು. ಇವರ ಅಗಲಿಕೆಯಿಂದ ವೃತ್ತಿರಂಗಭೂಮಿಯ ಒಂದು ಅಧ್ಯಾಯ ಮುಗಿದಂತಾಗಿದೆ.

ಮಾಸ್ಟರ್ ಹಿರಣ್ಣಯ್ಯನವರ ನಾಟಕವನ್ನು ನೋಡಲು ಪ್ರೇಕ್ಷಕರು ಒಂದು ಕಡೆ ಉತ್ಸುಕರಾಗಿರುತ್ತಿದ್ದರೆ, ಮತ್ತೊಂದು ಕಡೆ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಎದೆ ಢವಗುಟ್ಟುತ್ತಿತ್ತು. ಅವರು ಇವತ್ತು ಯಾವ ರಾಜಕಾರಣಿಯನ್ನು ಮಾತಿನ ಚಾಟಿಯಿಂದ ಜಾಡಿಸುತ್ತಾರೋ ಎಂಬ ಕುತೂಹಲ.

ಸಂಬಂಧಪಟ್ಟ ರಾಜಕಾರಣಿ ಅಥವಾ ಅಧಿಕಾರಿಯನ್ನು ಅಂದಿನ ನಾಟಕದ ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಅವರನ್ನು ಮುಂದಿನ ಸಾಲಿನಲ್ಲಿ ಕೂರಿಸಿ ಅವರನ್ನು ಅಪರೋಕ್ಷವಾಗಿ ಟೀಕಿಸುತ್ತಿದ್ದರು. ಅಂದು ನಡೆದ ಭ್ರಷ್ಟಾಚಾರವು ಅದೇ ದಿನ ಹಿರಣ್ಣಯ್ಯನವರ ನಾಟಕದಲ್ಲಿ ಪ್ರಸ್ತಾಪವಾಗುತ್ತಿತ್ತು. ಹಿರಣ್ಣಯ್ಯನವರದು ಅಂಥಹ ನೇರ, ನಿಷ್ಠುರ ನಡವಳಿಕೆ.

ಐತಿಹಾಸಿಕ, ಪೌರಾಣಿಕ ನಾಟಕಗಳಿಗೆ ಸೀಮಿತವಾಗಿದ್ದ ವೃತ್ತಿ ರಂಗಭೂಮಿಯನ್ನು ಬೇರೊಂದು ದಿಕ್ಕಿಗೆ ಕೊಂಡೊಯ್ದ ಕೀರ್ತಿ ಹಿರಣ್ಣಯ್ಯನವರದು. ಇವರು ವೃತ್ತಿ ರಂಗಭೂಮಿಗೆ ಕ್ರಾಂತಿಕಾರಿ ಬದಲಾವಣೆ ತಂದರು. ಲಂಚಾವತಾರ, ಭ್ರಷ್ಟಾಚಾರ, ಅತ್ಯಾಚಾರ, ಕಪಿಮುಷ್ಠಿ ಮುಂತಾದ ನಾಟಕಗಳು ಸಮಾಜದ ಹುಳುಕುಗಳ ಕನ್ನಡಿಯಂತಿದ್ದವು.

ದೈನಂದಿನ ಬೆಳವಣಿಗೆಗಳನ್ನು ತಮ್ಮ ಮಾತಿನ ಪ್ರಖರತೆಯ ಮೂಲಕ ಅವರು ಜನಸಾಮಾನ್ಯರಿಗೆ ತಲುಪಿಸುತ್ತಿದ್ದರು.  ರಂಗಭೂಮಿಯ ತಜ್ಞರು ಹೇಳುವ ಪ್ರಕಾರ, 50 ವರ್ಷಗಳ ಅವಧಿಯಲ್ಲಿ ಹಿರಣಯ್ಯನವರಷ್ಟು ಜನಪ್ರಿಯತೆ ಪಡೆದ ಮತ್ತೊಬ್ಬ ರಂಗಕಲಾವಿದನಿಲ್ಲ.

1975ರಿಂದ 1977ರವರೆಗೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯ ದಿನಗಳಲ್ಲಿ ಹಲವು ಕಲಾವಿದರು ನಾಟಕಾಭಿನಯ ನಿಲ್ಲಿಸಿ ಬಿಟ್ಟರು. ಸರ್ಕಾರವನ್ನು ಟೀಕಿಸಿದರೆ ಸೆರೆ ಮನೆಗೆ ಹೋಗಬೇಕಾದೀತು ಎಂಬ ಅಂಜಿಕೆ. ಹಿರಣ್ಣಯ್ಯನವರು ಮಾತ್ರ ಅಂಜಲಿಲ್ಲ. ತುರ್ತು ಪರಿಸ್ಥಿತಿಯ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರುವುದನ್ನು ಅವರು ತಮ್ಮ ನಾಟಕಗಳಲ್ಲಿ ನಿರ್ಭೀತಿಯಿಂದ ಪ್ರಸ್ತುತಪಡಿಸಿದರು.

ಹಿರಣ್ಣಯ್ಯ ಮಿತ್ರ ಮಂಡಳಿಯು ಹಲವು ದಶಕಗಳವರೆಗೆ ರಾಜ್ಯದ ಮನೆ ಮಾತಾಗಿತ್ತು. ಜನರಿಗೆ ತುಂಬಾ ಹತ್ತಿರವಾದ ವಸ್ತುವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದುದರಿಂದ ಹಿರಣ್ಣಯ್ಯನವರ ನಾಟಕ ನೋಡಲು ಜನ ಮುಗಿ ಬೀಳುತ್ತಿದ್ದರು. ಇಂದು ಪ್ರದರ್ಶನವಾದ ನಾಟಕದ ಸಂಭಾಷಣೆಯು ನಾಳೆ ಬದಲಾಗಿರುತ್ತಿತ್ತು.

ಪ್ರಸಕ್ತ ವಿದ್ಯಮಾನಗಳನ್ನು ಅವರು ಅತ್ಯಂತ ಶೀಘ್ರವಾಗಿ ನಾಟಕಕ್ಕೆ ಅಳವಡಿಸುತ್ತಿದ್ದರು. ದೂರದರ್ಶನ ಸೌಲಭ್ಯವಿಲ್ಲದ ದಿನಗಳಲ್ಲಿ ಇವರ ನಾಟಕಗಳು ಮನರಂಜನೆಯ ಪ್ರಮುಖ ಸಾಧನವಾಗಿದ್ದವು.

ಹಿರಣ್ಣಯ್ಯ ಸ್ನೇಹ ಜೀವಿಯಾಗಿದ್ದರು. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳನೇಕರು ಇವರ ಆಪ್ತ ವಲಯದಲ್ಲಿದ್ದರು. ನಿಜಲಿಂಗಪ್ಪನವರಿಂದ ಆರ್.ಗುಂಡೂರಾವ್‍ವರೆಗೆ ಹಲವು ಮುಖ್ಯಮಂತ್ರಿಗಳು ಇವರ ಆತ್ಮೀಯರಾಗಿದ್ದರು. ಅವರ ಸರ್ಕಾರದ ಹುಳುಕನ್ನು ಹಿರಣ್ಣಯ್ಯನವರು ಮುಚ್ಚಿಡುತ್ತಿರಲಿಲ್ಲ. ಇವರ ನಾಲಿಗೆಗೆ ಸಿಕ್ಕಿ ಕೊಳ್ಳಲು ಭಯವಾಗುತ್ತದೆ ಎಂದು ಹಲವು ರಾಜಕಾರಣಿಗಳು ಹೇಳಿದ್ದಾರೆ.

ವಿಡಂಬನೆಯೇ ಇವರ ಮೂಲ ಮಂತ್ರ. ತಮ್ಮ ಬದುಕನ್ನು ಕೂಡ ಇವರು ವಿಡಂಬನೆಗೆ ಒಳಪಡಿಸುತ್ತಿದ್ದರು. ಇವರ ಟೀಕಾಸ್ತ್ರಗಳು ರಾಜಕಾರಣಿಗಳ ಆಪ್ತರನ್ನು ಕೆರಳಿಸಿದ ಹಲವು ನಿದರ್ಶನಗಳಿವೆ. ನೀವು ನಮ್ಮ ನಾಯಕರ ಕ್ಷಮೆ ಕೇಳಬೇಕು ಎಂದು ಘೇರಾವೋ ಮಾಡಿದ್ದಾರೆ. ನಾನು ಯಾರೊಬ್ಬರನ್ನು ವೈಯಕ್ತಿಕವಾಗಿ ನಿಂದಿಸುವುದಿಲ್ಲ. ಭ್ರಷ್ಟಾಚಾರವನ್ನು ಮಾತ್ರ ಖಂಡಿಸುತ್ತೇನೆ ಎಂದು ಹಿರಣ್ಣಯ್ಯ ಸ್ಪಷ್ಟೀಕರಣ ಕೊಡುತ್ತಿದ್ದರು.

ಕಲ್ಚರಲ್ ಕಮೆಡಿಯನ್ ಎಂದು ಕರೆಸಿಕೊಳ್ಳುತ್ತಿದ್ದ ಹಿರಣ್ಣಯ್ಯನವರು 1955ರಲ್ಲಿ ಮೊದಲ ತೇದಿ ಎಂಬ ಚಿತ್ರದಲ್ಲಿ ಅಭಿನಯಿಸಿದರು. ಮುತ್ತೈದೆ ಭಾಗ್ಯ, ದೈವ ಸಂಕಲ್ಪ , ಋಣಮುಕ್ತಳು, ದೇವರ ಮನೆ, ಹರಕೆಯ ಕುರಿ, ದೇವದಾಸಿ, ಸಾವಿರ ಮೆಟ್ಟಿಲು, ಗಜ, ಲಂಚ ಸಾಮ್ರಾಜ್ಯ ಸೇರಿದಂತೆ 30 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಮಾಸ್ಟರ್ ಹಿರಣ್ಣಯ್ಯನವರ ನಿಧನದಿಂದ ವೃತ್ತಿ ರಂಗಭೂಮಿಯ ಪ್ರಮುಖ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ.

ಎನ್.ಎಸ್.ರಾಮಚಂದ್ರ

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ