ಈ ವಾರ ತೆರೆ ಮೇಲೆ ‘ಮತ್ತೆ ಉಧ್ಭವ’

ಈ ಸುದ್ದಿಯನ್ನು ಶೇರ್ ಮಾಡಿ

90ರ ದಶಕದಲ್ಲಿ ಬಿಡುಗಡೆಗೊಂಡ ಉದ್ಭವ ಚಿತ್ರ ಬೆಳ್ಳಿ ಪರದೆ ಮೇಲೆ ದೊಡ್ಡ ಸದ್ದನ್ನೇ ಮಾಡಿ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಈಗ ದಶಕಗಳ ನಂತರ ಮತ್ತೆ ಉದ್ಭವ ಎನ್ನುತ್ತ ಸಿನಿಪ್ರಿಯರ ಮುಂದೆ ಬರುತ್ತಿದೆ. ಈ ಚಿತ್ರಕ್ಕೆ ನಿತ್ಯಾನಂದ ಭಟ್ ಬಂಡವಾಳ ಹೂಡಿದ್ದಾರೆ. ಕೂಡ್ಲು ರಾಮಕೃಷ್ಣ ಅವರ ನಿರ್ದೇಶನದ 28ನೆ ಚಿತ್ರ ಇದಾಗಿದ್ದು, ಹಿಂದಿನ ಚಿತ್ರದ ಸೀಕ್ವೇಲ್ ಆಗಿದ್ದರೂ, ಈಗಿನ ಕಾಲಘಟ್ಟಕ್ಕೆ ತಕ್ಕಂಥ ಕಥೆ, ಚಿತ್ರಕಥೆ ಈ ಚಿತ್ರದಲ್ಲಿದೆ.

ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ಚಿತ್ರ ರಿಲೀಸಾದ ನಂತರ ನನಗೆ ಖಂಡಿತ ಕೆಲವು ಬೆದರಿಕೆ ಕರೆಗಳು ಬರುತ್ತವೆ. ರಾಜಕಾರಣಿಗಳು, ಮಠಾಧೀಶರು ನನ್ನ ಕಥೆಯಲ್ಲಿ ಬಂದು ಹೋಗುತ್ತಾರೆ.  ಹಿಂದೆ ಆ ಚಿತ್ರ ಮಾಡಿದಾಗಲೂ ಹೀಗೇ ಆಗಿತ್ತು. 160 ರಿಂದ 180 ಥಿಯೇಟರ್‍ಗಳಲ್ಲಿ ಚಿತ್ರ ರಿಲೀಸಾಗುತ್ತಿದೆ. ಆಗ ನಟ ಅನಂತನಾಗ್ ನಿರ್ವಹಿಸಿದ್ದ ಪಾತ್ರವನ್ನು ಈ ಚಿತ್ರದಲ್ಲಿ ರಂಗಾಯಣ ರಘು ಅವರು ನಿರ್ವಹಿಸಿದ್ದಾರೆ. ಆತನ ಮಗ ತಂದೆಯಂತೆ ಬೆರಳು ತೋರಿಸಿದರೆ ಹಸ್ತವನ್ನೇ ನುಂಗುವಂಥ ಮಹಾನ್ ಚತುರ. ಭಯ-ಭಕ್ತಿಯನ್ನು ಆತ ಸಮಯ ಸಂದರ್ಭೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ ಎನ್ನುವುದು ಈ ಚಿತ್ರದಲ್ಲಿದೆ.

ಅಪ್ಪ ಕಾಪೆರ್ರೇಷನ್ ಲೆವೆಲ್‍ನಲ್ಲಿದ್ದರೆ, ಮಗ ವಿಧಾನಸೌಧದ ಸಂಪರ್ಕ ಬೆಳಸಿಕೊಂಡಿರುತ್ತಾನೆ. ಈ ಪಾತ್ರದಲ್ಲಿ ನಟ ಪ್ರಮೋದ್ ಕಾಣಿಸಿಕೊಂಡಿದ್ದು, ಇವರ ಜೋಡಿಯಾಗಿ ಮಿಲನ ನಾಗರಾಜ್ ನಟಿಸಿದ್ದಾರೆ. ಸ್ವಾಮೀಜಿಯಾಗಿ ಮೋಹನ್ ಬಣ್ಣ ಹಚ್ಚುವುದರ ಜೊತೆಗೆ ಚಿತ್ರದ ಸಂಭಾಷಣೆ ರಚಿಸಿದ್ದಾರೆ. ಇವರ ಭಕ್ತೆಯಾಗಿ ಶುಭ ರಕ್ಷಾ ನಟಿಸಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಸುಧಾ ಬೆಳವಾಡಿ, ಅವಿನಾಶ್, ಪಿ.ಡಿ. ಸತೀಶ್, ಗಿರೀಶ್‍ಭಟ್, ನರೇಶ್, ಶಂಕರ್ ಅಶ್ವಥ್, ನಿರಂಜನ್ ನಟಿಸಿದ್ದಾರೆ. ಜಯಂತ್ ಕಾಯ್ಕಿಣಿ-ಪ್ರಹ್ಲಾದ್ ಅವರ ಸಾಹಿತ್ಯದ ಮೂರು ಗೀತೆಗಳಿಗೆ ವಿ.ಮನೋಹರ್ ಅವರ ಸಂಗೀತ, ಮೋಹನ್ ಅವರ ಛಾಯಾಗ್ರಹಣವಿದೆ. ನಿತ್ಯಾನಂದ ಭಟ್ ನಿರ್ಮಾಣದ ಈ ಚಿತ್ರದ ಉಸ್ತುವಾರಿಯನ್ನು ಗುರುಪ್ರಸಾದ್ ಮುದ್ರಾಡಿ ನಿರ್ವಹಿಸಿದ್ದಾರೆ.

ನಾಯಕ ಪ್ರಮೋದ್ ಮಾತನಾಡಿ, ಇದು ನನ್ನ ಮೂರನೇ ಚಿತ್ರ. ಅತ್ಯಲ್ಪ ಕಾಲದಲ್ಲೇ ಇಂಥ ಅದ್ಭುತ ಚಿತ್ರದ ಸೀಕ್ವೇಲ್‍ನಲ್ಲಿ ನನಗೆ ಅವಕಾಶ ಸಿಕ್ಕಿದೆ. ನಾನು ಈವರೆಗೆ ಎಂಥ ಪಾತ್ರದ ಹುಡುಕಾಟದಲ್ಲಿದ್ದೆನೋ ಅಂಥದ್ದೇ ಪಾತ್ರ ಈ ಚಿತ್ರದಲ್ಲಿತ್ತು. ಮಹಾನ್ ಕಿರಾತಕ, ಚಿತ್ರದಲ್ಲಿನ ಎಲ್ಲ ಪಾತ್ರಗಳ ಜೊತೆಗೂ ನಾನಿರುತ್ತೇನೆ. ಅದರಲ್ಲಿ ಗಣಪತಿ ಉದ್ಭವವಾಗಿತ್ತು, ಇದರಲ್ಲಿ ಏನು ಉದ್ಭವ ಎಂದು ಚಿತ್ರದಲ್ಲಿ ಹೇಳಿದ್ದೇವೆ ಎಂದು ಹೇಳಿಕೊಂಡರು.

ನಾಯಕಿ ಮಿಲನ ನಾಗರಾಜ್ ಮಾತನಾಡಿ, ನಾವು ಯಾವುದೇ ಪಾತ್ರ ಮಾಡಿದರೂ ಅದನ್ನು ಜನ ಗುರ್ತಿಸುವಂತಿರಬೇಕು. ಅಂಥಾ ಪಾತ್ರ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ. ಎರಡು ಶೇಡ್ ಇರುವ ಪಾತ್ರ ಎಂದು ಹೇಳಿದರು. ಲಹರಿ ವೇಲು, ಮಾತನಾಡಿ ಮನೋಹರ್ 5 ಒಳ್ಳೇ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಹಳೇ ಚಿತ್ರದ ಆಡಿಯೋ ಕೂಡ ನಾವೇ ಮಾಡಿದ್ದೆವು ಎಂದು ಹೇಳಿದರು.

ವೈಟ್ ಪ್ಯಾಂಥರ್ಸ್ ಕ್ರಿಯೇಟರ್ಸ್ ಸಂಸ್ಥೆಯವರು ನಿರ್ಮಿಸಿರುವ ಈ ಚಿತ್ರಕ್ಕೆ ಮೋಹನ್ ಅವರ ಛಾಯಾಗ್ರಹಣವಿದೆ. ಎಸ್.ಮೋಹನ್ ಸಂಭಾಷಣೆ ಬರೆದಿದ್ದಾರೆ. ವಸಂತ್‍ರಾವ್ ಕುಲಕರ್ಣಿ ಕಲಾನಿರ್ದೇಶನ ಈ ಚಿತ್ರಕ್ಕಿದೆ. ತೆರೆ ಮೇಲೆ ಮತ್ತೆ ಉದ್ಭವದ ದರ್ಶನವಾಗಲಿದೆ.

 

Facebook Comments