‘ಕಾರ್ಮಿಕರ ದಿನ’ದ ಆಚರಣೆ ಶುರುವಾಗಿದ್ದೇಕೆ..? ಹೇಗೆ..?

ಈ ಸುದ್ದಿಯನ್ನು ಶೇರ್ ಮಾಡಿ

ಮೇ 1ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನು ಲೇಬರ್ ಡೇ, ಮೇ ಡೇ ವರ್ಕರ್ಸ್ ಡೇ ಎಂದೂ ಕರೆಯಲಾಗುತ್ತದೆ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಕಾರ್ಮಿಕ ದಿನವನ್ನು ಆಚರಿಸಿಕೊಂಡು ಬರುತ್ತಿವೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ.

ಸಮಾಜ ಹಾಗೂ ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಬಹಳ ದೊಡ್ಡದು. ಕಾರ್ಮಿಕರು ತಮ್ಮ ಬೆವರಿನ ದುಡಿಮೆಯೊಂದಿಗೆ ತಮ್ಮನ್ನು ನಂಬಿರುವ ಕುಟುಂಬವನ್ನು ಫೋಷಿಸುವುದರ ಜತೆಗೆ ಅನ್ನ ನೀಡುವ ಸಂಸ್ಥೆಯ ಅಭಿವೃದ್ಧಿಗೂ ಪರೋಕ್ಷವಾಗಿ ಕಾರಣರಾಗಿರುತ್ತಾರೆ.

ಪ್ರತಿಯೊಂದು ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಕಾರ್ಮಿಕ ಶಕ್ತಿ ಅತ್ಯವಶ್ಯಕ. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಕಾರ್ಮಿಕ ಶಕ್ತಿ ಅನಿವಾರ್ಯ. ದಕ್ಷ ಹಾಗೂ ಪ್ರಾಮಾಣಿಕ ಕಾರ್ಮಿಕರು ಸಂಸ್ಥೆಯಾಗಲಿ, ಕಾರ್ಖಾನೆಗಳಾಗಲಿ ಅವುಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು ಆರ್ಥಿಕ ಪ್ರಗತಿಗೆ ಕಾರಣಕರ್ತರಾಗಿರುತ್ತಾರೆ.

ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ತೋಳ್ಬಲ ಹಾಗೂ ಬುದ್ಧಿಶಕ್ತಿಯಿಂದ ಶ್ರಮವನ್ನು ವ್ಯಯಿಸಿ ಕೆಲಸ ಮಾಡುವವನನ್ನು ಕಾರ್ಮಿಕ ಎನ್ನಬಹುದು. ಪ್ರತಿಯೊಂದು ದೇಶದಲ್ಲಿ ದೈಹಿಕ ಇಲ್ಲವೇ ಬೌದ್ಧಿಕ ಶಕ್ತಿಯನ್ನು ಪ್ರದರ್ಶಿಸಿ ಕಾರ್ಮಿಕ ಆದಾಯವನ್ನು ಗಳಿಸಿ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಾರೆ.

ಈ ರೀತಿ ಆದಾಯ ಗಳಿಸುವ ವರ್ಗಕ್ಕೆ ಕಾರ್ಮಿಕ ವರ್ಗವೆಂದು ಕರೆಯುತ್ತಿದ್ದು, ಪ್ರತಿಯೊಂದು ದೇಶದಲ್ಲಿ ಶೇ.60 ರಿಂದ 65ರಷ್ಟು ಜನರು ಕಾರ್ಮಿಕ ವರ್ಗದಲ್ಲಿ ಕಂಡು ಬರುತ್ತಾರೆ.  ಬಂಡವಾಳ ಶಾಹಿಗಳು ಅನಿರ್ದಿಷ್ಟಾವಧಿವರೆಗೂ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿದ್ದರು.

ಇದನ್ನು ವಿರೋಧಿಸಿದ ಕಾರ್ಮಿಕರು ದಿನದ 8 ಗಂಟೆ ದುಡಿಯುವ ಅವಧಿ ಎಂಬ ಬೇಡಿಕೆ ಮುಂದಿಟ್ಟರು. ದಿನದ 24 ಗಂಟೆಗಳಲ್ಲಿ 8 ಗಂಟೆ ದೈನಂದಿನ ಚಟುವಟಿಕೆಗಳನ್ನು ಪೂರೈಸುವ 8 ಗಂಟೆ ದುಡಿಯುವ ಅವಧಿ ಹಾಗೂ ಇನ್ನುಳಿದ 8 ಗಂಟೆ ವಿಶ್ರಾಂತಿಗಾಗಿ ಮೀಸಲು ಎಂಬ ವಾದ ಮುಂದಿಟ್ಟರು.

ನೌಕರರು ಬೀದಿಗಿಳಿದಿದ್ದು ಇದೇ ಮೊದಲಲ್ಲ. 8 ಗಂಟೆ ದುಡಿಯುವ ಅವಧಿ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1, 1886ರಂದು ಲಕ್ಷಾಂತರ ಸಂಖ್ಯೆಯಲ್ಲಿ ಹೋರಾಟ ಮಾಡಿದ್ದರು.

ಇದರ ಫಲವಾಗಿ ಕಾರ್ಮಿಕರು ಹೋರಾಟ ಮುಂದುವರಿಸಿದ್ದರಿಂದ ಕೊನೆಗೆ ನ್ಯಾಯಯುತವಾದ ದಿನದ 8 ಗಂಟೆ ಕಾರ್ಮಿಕರ ಕೆಲಸದ ಅವಧಿಯನ್ನು ಚಾಲನೆಗೆ ತಂದರು. ಇದರ ಸವಿ ನೆನಪಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಭಾರತದಲ್ಲಿ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರೆಂದು ವಿಭಾಗಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯದಡಿ ದುಡಿಯುವ ಕಾರ್ಮಿಕರು ಬಹುತೇಕ ಸಂಘಟಿತ ಕಾರ್ಮಿಕರಾಗಿದ್ದು, ದೇಶದಲ್ಲಿ ಕೇವಲ ಪ್ರತಿಶತ 12 ರಿಂದ 15 ರವರೆಗೆ ಮಾತ್ರ ಕಂಡುಬಂದಿದ್ದು,

ತಮ್ಮ ಸಂಘಟಿತ ಹೋರಾಟದ ಮೂಲಕ ಬೇಡಿಕೆಗಳನ್ನು ತಕ್ಕಮಟ್ಟಿಗೆ ಈಡೇರಿಸಿಕೊಳ್ಳುತ್ತಿದ್ದರೆ, ಇನ್ನುಳಿದ ಶೇ.85ರಷ್ಟು ಕಾರ್ಮಿಕರು, ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಭೂ ರಹಿತ ಮಹಿಳೆ ಹಾಗೂ ಪುರುಷ ಕಾರ್ಮಿಕರು ಹೊಟೇಲ್‍ಗಳಲ್ಲಿ, ಗಾರ್ಮೆಂಟ್ಸ್‍ಗಳಲ್ಲಿ ಹಾಗೂ ಸಣ್ಣ ಉದ್ದಿಮೆಗಳು ಮತ್ತಿತರ ಕ್ಷೇತ್ರಗಳಲ್ಲಿ ದುಡಿವ ಕೆಲಸಗಾರರು ಅಸಂಘಟಿತ ಕಾರ್ಮಿಕರು.

ಇವರಿಗೆ ಮೂಲತಃ ನಿರ್ದಿಷ್ಟ ಕೂಲಿ ಎಂಬುದೇ ಗಗನ ಕುಸುಮವಾಗಿದ್ದು, ತೀವ್ರತರ ಶೋಷಣೆಗೆ ಒಳಪಟ್ಟಿದ್ದಾರೆ. ಇಂತಹ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಸ್ವಾತಂತ್ರ್ಯ ನಂತರ ಕೇಂದ್ರ ಸರ್ಕಾರ 1949ರಲ್ಲಿ ಕನಿಷ್ಠ ಕೂಲಿ ಕಾಯ್ದೆ ಜಾರಿಗೆ ತಂದಿದ್ದು, ಆ ಕಾಯ್ದೆಯು ಬಹುತೇಕವಾಗಿ ಕಾಯ್ದೆಯಾಗಿಯೇ ಉಳಿದಿದ್ದು, ಪರಿಪೂರ್ಣವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ.

ಒಟ್ಟಾರೆ ಭಾರತದಲ್ಲಿ ಕಾರ್ಮಿಕರು ಶೋಷಣೆಯಲ್ಲಾ ಬದುಕು ಸಾಗಿಸುತ್ತಿದ್ದು, ಶ್ರೀಮಂತರು ಶ್ರೀಮಂತರಾಗಿಯೇ ಮಂದುವರೆದರೆ, ಬಡವರು ಬಡವರಾಗಿಯೇ ಉಳಿದಿದ್ದಾರೆ.

ಇಂತಹ ಶೋಷಣೆ ವಿರುದ್ಧ ಕಾರ್ಮಿಕ ಒಕ್ಕೂಟಗಳಲ್ಲಿ ಐಕ್ಯತೆ ಕಾಪಾಡಿಕೊಂಡು ಹೋರಾಟ ಮಾಡಲು ಸದಕಾಲ ಶ್ರಮಿಸುತ್ತಿರಬೇಕು. ಆಗ ಶೋಷಣೆ ನಿಲ್ಲುತ್ತದೆ. ಕಾರ್ಮಿಕರಿಗೂ ನ್ಯಾಯ ದೊರೆಯುತ್ತದೆ. ಇದು ಕೇವಲ ಕಾರ್ಮಿಕರ ಐಕ್ಯತೆಯಿಂದ ಮಾತ್ರ ಸಾಧ್ಯ.

ಸಂಘಟಿತರೊಂದಿಗೆ ಅಸಂಘಟಿತ ಕಾರ್ಮಿಕರು ಸೇರಿ ಐಕ್ಯತೆಯಿಂದ ಒಕ್ಕೂಟ ರಚಿಸಿ ಆ ಮೂಲಕ ತಮ್ಮ ಬದುಕನ್ನು ಹಸನಾಗಿ ಮಾಡಿಕೊಳ್ಳಲಿ. ದೇಶದ ಕಾರ್ಮಿಕರೆಲ್ಲರಿಗೂ ಕಾರ್ಮಿಕ ದಿನಾಚರಣೆ ಶುಭಾಶಯಗಳು.

Facebook Comments