ಇಂದಿನಿಂದ ಮಾಯಾಬಜಾರ್ ದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ನಲ್ಲಿ ಹಲವಾರು ಉತ್ಸಾಹಿ ಯುವ ಪ್ರತಿಭೆಗಳು ಚಿತ್ರರಂಗಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಅಂತಹ ಪ್ರತಿಭೆಗಳನ್ನು ಹುಡುಕಿ ಅವರ ಸಾಮಥ್ರ್ಯವನ್ನು ಹೊರಹಾಕುವ ಪ್ರಯತ್ನಕ್ಕೆ ಮುಂದಾಗಿರುವ ಸಂಸ್ಥೆಯೇ ಪಿಆರ್‍ಕೆ ಪ್ರೋಡಕ್ಷನ್ಸ್. ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಸ್ಥಾಪಿಸಿರುವ ಪಿಆರ್‍ಕೆ ಬ್ಯಾನರ್‍ನಿಂದ ತಯಾರಾಗಿರುವ ಎರಡನೆ ಚಿತ್ರವಾಗಿ ಮಾಯಾಬಜಾರ್ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ.

ವಿಭಿನ್ನ ಪ್ರಯತ್ನದ ಕಥೆಯನ್ನು ಪ್ರೇಕ್ಷಕರಿಗೆ ನೀಡುವ ನಿಟ್ಟಿನಲ್ಲಿ ಸಿದ್ಧಗೊಂಡಿರುವ ಈ ಮಾಯಾಬಜಾರ್ ಚಿತ್ರವನ್ನು ರಾಧಾಕೃಷ್ಣರೆಡ್ಡಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಒಂದು ಮೊಟ್ಟೆ ಕತೆಯ ನಟ ರಾಜ ಬಿ.ಶೆಟ್ಟಿ, ಚೈತ್ರಾ, ಅಚ್ಚುತಕುಮಾರ್, ವಸಿಷ್ಟಸಿಂಹ, ಸುಧಾರಾಣಿ ಹಾಗೂ ಸಾಧು ಕೋಕಿಲ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ವಿಶೇಷವಾಗಿ ಈ ಚಿತ್ರದಲ್ಲಿ ಸಾಧುಕೋಕಿಲ ಹಿಂದೆಂದೂ ಮಾಡಿರದಂತಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಹೊಸಬಗೆಯ ಚಿತ್ರಗಳನ್ನು ಇಷ್ಟ ಪಡುವ ಪ್ರೇಕ್ಷಕರಿಗೆ ಇದು ಹೊಸ ಅನುಭವವನ್ನೇ ನೀಡುತ್ತದೆ ಎಂಬ ನಂಬಿಕೆ ಚಿತ್ರತಂಡದ್ದು. ಇದೊಂದು ಹ್ಯೂಮರಸ್ ಇರುವ ಕಾಮಿಡಿ ಚಿತ್ರವಾಗಿದ್ದು, ನೋಟ್‍ಬ್ಯಾನ್ ಪ್ರಕರಣವೂ ಚಿತ್ರದ ಒಂದು ಭಾಗವಾಗಿ ಹೊರಬರಲಿದೆಯಂತೆ. ಈ ಚಿತ್ರದಲ್ಲಿ ಬರುವ ಪ್ರತಿ ಪಾತ್ರವೂ ಪ್ರಧಾನವಾಗಿದ್ದು, ನೋಡುವ ಪ್ರೇಕ್ಷಕರಿಗೆ ಹೆಚ್ಚು ಮನರಂಜನೆ ನೀಡುವ ಜತೆಗೆ ಕಾಮಿಡಿಯೂ ಹೆಚ್ಚಾಗಿದ್ದು, ಅಳಿಸುವುದು ಕಡಿಮೆ ಇದೆಯಂತೆ.

ಈ ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮಾಡಿದ್ದು, ಯೋಗರಾಜ್ ಭಟ್ ಹಾಗೂ ಪವನ್ ಸಾಹಿತ್ಯ ಒದಗಿಸಿದ್ದಾರೆ. ಪ್ರತಿಯೊಂದು ಹಾಡೂ ಸಂದರ್ಭಕ್ಕನುಗುಣವಾಗಿದ್ದು, ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಜಗದೀಶ್ ಸಂಕಲನ, ಹರ್ಷ, ಧನು ಅವರ ನೃತ್ಯ ನಿರ್ದೇಶನವಿದ್ದು, ಚಿತ್ರದ ಕಥೆ-ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ರಾಧಾಕೃಷ್ಣರೆಡ್ಡಿ ಬರೆದಿದ್ದಾರೆ.

ಪಿಆರ್‍ಕೆ ಪ್ರೋಡಕ್ಷನ್ಸ್ ಲಾಂಛನದಡಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಹಾಗೂ ಎಂ.ಗೋವಿಂದು ನಿರ್ಮಿಸಿರುವ ಈ ಮಾಯಾಬಜರ್ ಚಿತ್ರ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಪವರ್‍ಸ್ಟಾರ್ ಒಂದು ಪವರ್‍ಫುಲ್ ಸ್ಟೆಪ್ ಹಾಕಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಜತೆಗೆ ಪ್ರೋತ್ಸಾಹ ನೀಡುತ್ತ ಚಿತ್ರದಲ್ಲಿ ತಾವೂ ಕೂಡ ಭಾಗವಾಗಿ ಕಾಣಿಸಿಕೊಂಡಿರುವ ಪುನಿತ್‍ರಾಜ್‍ಕುಮಾರ್ ಅವರ ಆಸಕ್ತಿಯನ್ನು ಮೆಚ್ಚಲೇಬೇಕು. ರಾಜ್ಯಾದ್ಯಂತ ಮಾಯಾ ಬಜಾರ್ ಪ್ರೇಕ್ಷಕರನ್ನು ಯಾವ ರೀತಿ ಮೋಡಿ ಮಾಡುತ್ತದೆ ಎಂಬುದನ್ನು ನೋಡಬೇಕು.

Facebook Comments