ನ.1ರಿಂದ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಡ್ಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.9- ನವೆಂಬರ್ 1ರಿಂದ ನಗರದಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಮೇಯರ್ ಗೌತಮ್‍ಕುಮಾರ್ ಸೂಚಿಸಿದ್ದಾರೆ. ಕನ್ನಡ ನಾಮಫಲಕ ಹಾಕಲು ನಿರಾಕರಿಸುವ ಮಳಿಗೆಗಳಿಗೆ ಉದ್ಯಮ ಪರವಾನಗಿ ನೀಡದಿರುವ ನಿರ್ಧಾರಕ್ಕೆ ಮೇಯರ್ ಬಂದಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ನಿಟ್ಟಿನಲ್ಲಿ ಸಭೆ ನಡೆಸಿರುವ ಮೇಯರ್ ಗೌತಮ್‍ಕುಮಾರ್ ಅವರು ನವೆಂಬರ್ ತಿಂಗಳಿನಾದ್ಯಂತ ನಗರದಲ್ಲಿರುವ ಎಲ್ಲ ಮಳಿಗೆಗಳ ಮೇಲೆ ಕನ್ನಡ ನಾಮಫಲಕ ಹಾಕಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬರುವ ನವೆಂಬರ್ 1ರಿಂದ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.

ಮಳಿಗೆಯವರು ತಮ್ಮ ಅಂಗಡಿಗಳ ಮೇಲೆ ದೊಡ್ಡ ಅಕ್ಷರಗಳಲ್ಲಿ ಕನ್ನಡ ನಾಮಫಲಕ ಹಾಕಿಸಬೇಕು. ಒಂದು ವೇಳೆ ಕನ್ನಡ ನಾಮಫಲಕವಿಲ್ಲದಿದ್ದರೆ ಅಂತಹ ಮಳಿಗೆಗಳಿಗೆ ಟ್ರೇಡ್ ಲೈಸೆನ್ಸ್ ನೀಡಬಾರದು. ಕನ್ನಡ ನಾಮಫಲಕವಿದ್ದ ಮಳಿಗೆಗಳನ್ನು ಖಚಿತಪಡಿಸಿಕೊಂಡ ನಂತರವಷ್ಟೆ ಉದ್ಯಮ ಪರವಾನಗಿ ನೀಡುವಂತೆ ಅಧಿಕಾರಿಗಳಿಗೆ ಗೌತಮ್‍ಕುಮಾರ್ ಕಟ್ಟಪ್ಪಣೆ ಹೊರಡಿಸಿದ್ದಾರೆ. ಕನ್ನಡಪರ ಸಂಘಟನೆಗಳು ನಗರದಲ್ಲಿ ಹಲವಾರು ಬಾರಿ ಕನ್ನಡ ನಾಮಫಲಕ ಚಳವಳಿ ಹಮ್ಮಿಕೊಂಡಿದ್ದವು.

ಈ ಹಿಂದಿನ ಮೇಯರ್‍ಗಳನ್ನು ಭೇಟಿಯಾಗಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಒತ್ತಾಯಿಸಿದ್ದವು.  ಇದೀಗ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿರುವ ಗೌತಮ್‍ಕುಮಾರ್ ಅವರು ಒಂದೇ ವಾರದಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

Facebook Comments