ಅಣ್ಣಾವ್ರ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಬಿಬಿಎಂಪಿ ಮೇಯರ್, ಕಮಿಷನರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.25- ಸ್ವಚ್ಛ ಸರ್ವೇಕ್ಷಣಾ ಕುರಿತಂತೆ ಜಾಗೃತಿ ಮೂಡಿಸಲು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಮತ್ತು ರಸ್ತೆ ಓಟದಲ್ಲಿ ಮೇಯರ್ ಗೌತಮ್‍ಕುಮಾರ್ ಹಾಗೂ ಆಯುಕ್ತ ಅನಿಲ್‍ಕುಮಾರ್ ಅವರು ವರನಟ ಡಾ.ರಾಜ್‍ಕುಮಾರ್ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಡ್ಯಾನ್ಸ್ ಮಾಡಿ ಗಮನ ಸೆಳೆದರು.

ಕಬ್ಬನ್‍ಪಾರ್ಕ್ ಮುಖ್ಯದ್ವಾರದಲ್ಲಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನ-2020ಗೆ ಚಾಲನೆ ನೀಡಿದ ಸಂದರ್ಭದಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಮೇಯರ್, ಕಮಿಷನರ್ ಸ್ಟೆಪ್ ಹಾಕುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಮತ್ತಿತರ ಅಧಿಕಾರಿಗಳು ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು.

ನಂತರ ಮಾತನಾಡಿದ ಮೇಯರ್ ಅವರು ಸ್ವಚ್ಛ ಸರ್ವೇಕ್ಷಣದಲ್ಲಿ ನಗರಕ್ಕೆ ಮೊದಲ ಸ್ಥಾನ ಸಿಗುವವರೆಗೂ ಸ್ವಚ್ಛತಾ ಪ್ರಕ್ರಿಯೆಯಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ನಾಗರಿಕರು ಕೈ ಜೋಡಿಸಬೇಕೆಂದು ಮನವಿ ಮಾಡಿಕೊಂಡರು. ಕಸ ಮುಕ್ತ ಬೆಂಗಳೂರು ಮಾಡಲು ಪಾಲಿಕೆ ವತಿಯಿಂದ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ನಮ್ಮ ಈ ಕಾರ್ಯದಲ್ಲಿ ನಾಗರಿಕರು ಕೈ ಜೋಡಿಸಿ ಮನೆ ಮತ್ತು ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸಲು ಸಹಕರಿಸಬೇಕು ಎಂದರು. ವಿಶೇಷ ಆಯುಕ್ತ ರಂದೀಪ್ ಮಾತನಾಡಿ, ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ.

ಇದುವರೆಗೆ 40 ಸಾವಿರ ಪ್ರತಿಕ್ರಿಯೆಗಳು ಬಂದಿದ್ದು, ಇನ್ನೂ ಸಾವಿರಾರು ಮಂದಿ ತಮ್ಮ ಪ್ರತಿಕ್ರಿಯೆ ನೀಡುವ ಮೂಲಕ ನಗರಕ್ಕೆ ಉತ್ತಮ ಅಂಕ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಜಾಗೃತಿ ಜಾಥಾದಲ್ಲಿ ಬಿಬಿಎಂಪಿ ಹಾಗೂ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿವರ್ಗ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ನಮ್ಮ ಊರು ಸ್ವಚ್ಛ ಬೆಂಗಳೂರು ಎಂದು ಘೋಷಣೆ ಕೂಗಿದರು.

Facebook Comments