ಕಸದ ನಿವಾರಣೆ ಆರೋಗ್ಯಾಧಿಕಾರಿಗಳಿಗಷ್ಟೇ ಅಲ್ಲ, ಎಲ್ಲ ಅಧಿಕಾರಿಗಳ ಜವಾಬ್ದಾರಿ : ಮೇಯರ್ ಗೌತಮ್‍

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.31- ನಗರದ ಕಸದ ಸಮಸ್ಯೆ ನಿವಾರಣೆ ಮಾಡುವ ಜವಾಬ್ದಾರಿ ಕೇವಲ ಆರೋಗ್ಯಾಧಿಕಾರಿಗಳಿಗಷ್ಟೇ ಅಲ್ಲ, ಎಲ್ಲ ಅಧಿಕಾರಿಗಳೂ ಜವಾಬ್ದಾರಿ ವಹಿಸಿ ಕಸ ಮುಕ್ತ ನಗರವನ್ನಾಗಿಸಲು ಕ್ರಮ ಕೈಗೊಳ್ಳುವಂತೆ ಜಂಟಿ ಆಯುಕ್ತರಿಗೆ ಮೇಯರ್ ಗೌತಮ್‍ಕುಮಾರ್ ಸೂಚನೆ ನೀಡಿದರು. ರಾಜರಾಜೇಶ್ವರಿನಗರದ ವಲಯ ಕಚೇರಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದ ಕಸದ ಸಮಸ್ಯೆ ತೀವ್ರಗೊಳ್ಳುತ್ತಿದೆ.

ಈ ಸಮಸ್ಯೆ ನಿವಾರಣೆ ಮಾಡುವ ಜವಾಬ್ದಾರಿ ಎಲ್ಲ ಅಧಿಕಾರಿಗಳಿಗೂ ಇರಬೇಕು. ಎಲ್ಲರೂ ಕೈ ಜೋಡಿಸಿದರೆ ಮಾತ್ರ ಸಮಸ್ಯೆ ನಿವಾರಣೆಯಾಗಲು ಸಾಧ್ಯ. ಆದ್ದರಿಂದ ಎಲ್ಲ ಅಧಿಕಾರಿಗಳಿಗೂ ಜವಾಬ್ದಾರಿ ನೀಡಿ ಕಸಮುಕ್ತ ನಗರವನ್ನಾಗಿ ಮಾಡಿ ಎಂದು ಜಂಟಿ ಆಯುಕ್ತರಿಗೆ ಖಡಕ್ ಸೂಚನೆ ನೀಡಿದರು. ಇದಕ್ಕೂ ಮುನ್ನ ಸಭೆ ಪ್ರಾರಂಭವಾದ ಕೂಡಲೇ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ವಲಯ ವಿಶೇಷ ಆಯುಕ್ತರಿಗೆ ಸೂಚಿಸಿದರು.

ರಾಜರಾಜೇಶ್ವರಿನಗರ ವಲಯಕ್ಕೆ ಸಂಬಂಧಿಸಿದಂತೆ ಎಲ್ಲ ಮಳಿಗೆಗಳಿಗೂ ಪರವಾನಗಿ ನೀಡಿ ಪಾಲಿಕೆಗೆ ಹೆಚ್ಚು ಆದಾಯ ಬರುವಂತೆ ಮಾಡಬೇಕು. ಈ ಸಂಬಂಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಯಿತು.  ಈ ವಲಯದಲ್ಲಿ ಒಟ್ಟು 184 ಉದ್ಯಾನವನಗಳಿದ್ದು, 110 ಅಭಿವೃದ್ಧಿಗೊಂಡಿದ್ದು, 74 ಪಾರ್ಕ್‍ಗಳು ಅಭಿವೃದ್ಧಿಗೊಳ್ಳಬೇಕಿದೆ. 3 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಹಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಈ ಸಂದರ್ಭದಲ್ಲಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಹಾಪೌರರು ಪಾರ್ಕ್‍ಗಳ ಅಭಿವೃದ್ಧಿ, ನಿರ್ವಹಣೆ ಮತ್ತು ಬೋರ್‍ವೆಲ್‍ಗಳಿಗೆ ಎಷ್ಟು ಅನುದಾನ ಬೇಕಿದೆ ಎಂಬ ಅಂದಾಜು ವೆಚ್ಚ ಸಿದ್ಧಪಡಿಸಿಕೊಡಿ. ಅದಕ್ಕೆ ಈ ಬಾರಿಯ ಬಜೆಟ್‍ನಲ್ಲಿ ಅನುದಾನ ಮೀಸಲಿಡಲಾಗುವುದು. ಅಲ್ಲದೆ, ಉದ್ಯಾನವನಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ರಾಜಕಾಲುವೆಗಳಲ್ಲಿ ಸಮರ್ಪಕವಾಗಿ ಹೂಳೆತ್ತುವುದರ ಜತೆಗೆ ನಿರ್ವಹಣೆ ಮಾಡಬೇಕು. ದುರಸ್ತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಆರ್‍ಆರ್ ನಗರ ವಲಯದಲ್ಲಿ 2.53 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದು, ಒಟ್ಟು 274 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಇದೆ. ಈ ಪೈಕಿ ಈಗಾಗಲೇ 165 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಕಂದಾಯಾಧಿಕಾರಿ ತಿಳಿಸಿದರು. ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಿ ಹೆಚ್ಚು ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Facebook Comments