ಕೊಚ್ಚಿಹೋದ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭ: ಮೇಯರ್ ಗೌತಮ್‍

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26- ಮಳೆ ನೀರಿನಿಂದ ಕೊಚ್ಚಿ ಹೋಗಿರುವ ರಾಜಕಾಲುವೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಇಂದಿನಿಂದಲೇ ಆರಂಭಿಸಲಾಗುವುದು ಎಂದು ಮೇಯರ್ ಗೌತಮ್‍ಕುಮಾರ್ ತಿಳಿಸಿದರು. ಆಯುಕ್ತ ಅನಿಲ್‍ಕುಮಾರ್ ಮತ್ತಿತರ ಅಧಿಕಾರಿಗಳೊಂದಿಗೆ ರಾಜಕಾಲುವೆ ತಡೆಗೋಡೆ ಕೊಚ್ಚಿಹೋಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.

ರಾಜಕಾಲುವೆಗೆ 20 ವರ್ಷಗಳ ಹಿಂದೆ ರಿಟರ್ನಿಂಗ್ ವಾಲ್ ಇತ್ತು. ಎರಡು ವರ್ಷಗಳ ಹಿಂದೆ ನ್ಯಾಷನಲ್ ಹೈವೆ ಅವರು ರಕ್ಷಣಾ ಗೋಡೆ ಕಟ್ಟಿದ್ದರು. ಗೋಡೆ ನಿರ್ಮಿಸುವಾಗ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಹೀಗಾಗಿ ನಿನ್ನೆಯ ಮಳೆಗೆ ತಡೆಗೋಡೆ ಕೊಚ್ಚಿಹೋಗಿದೆ ಎಂದು ಮೇಯರ್ ಹೇಳಿದರು.

ತಡಗೋಡೆ ನಿರ್ಮಿಸಿದ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳನ್ನು ಕರೆಸಿ ಮಾಹಿತಿ ಪಡೆಯಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಇಂದಿನಿಂದಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಲಾಗಿದೆ ಎಂದರು. ಆಯುಕ್ತ ಅನಿಲ್‍ಕುಮಾರ್ ಮಾತನಾಡಿ, ಕೆರೆಯಿಂದ ಹೆಚ್ಚುವರಿಯಾಗಿ ಹರಿದು ಬಂದ ನೀರಿನ ಒತ್ತಡದಿಂದಾಗಿ ತಡೆಗೋಡೆ ಕುಸಿದುಹೋಗಿದೆ.

ಈ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೆಟ್ರೋ ಮತ್ತು ಬಿಬಿಎಂಪಿ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು. ಯಾರಿಂದ ತಾಂತ್ರಿಕ ದೋಷ ಎದುರಾಗಿದೆ ಎಂಬುದು ತಿಳಿದ ಬಳಿಕವಷ್ಟೇ ತಪ್ಪು ಮಾಡಿರುವ ಸಂಸ್ಥೆಗೆ ತಡೆಗೋಡೆ ನಿರ್ಮಾಣದ ಹೊಣೆ ನೀಡಲಾಗುವುದು ಎಂದರು.

ಮುಂಜಾಗ್ರತಾ ಕ್ರಮವಾಗಿ ತಡೆಗೋಡೆ ಕುಸಿದುಬಿದ್ದಿರುವ ರಸ್ತೆಯನ್ನು ಬ್ಲಾಕ್ ಮಾಡಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಯುಕ್ತರು ಹೇಳಿದರು.

Facebook Comments