‘ಸಿದ್ದರಾಮಯ್ಯ ಸಿಎಂ ಆಗ್ಬೇಕಿತ್ತು’ ಸುಧಾಕರ್ ಹೇಳಿಕೆಗೆ ಎಂ.ಬಿ.ಪಾಟೀಲ್ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 7-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಸುಧಾಕರ್ ಹೇಳಿಕೆಗೆ ನನ್ನ ಬೆಂಬಲವೂ ಇದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸಗಳನ್ನು ಮಾಡಿದರು, ಅನ್ನಭಾಗ್ಯ,ಕ್ಷೀರಭಾಗ್ಯ, ಪರಿಶಿಷ್ಟರಿಗೆ ಪ್ರತ್ಯೇಕ ಅನುದಾನ ಮೀಸಲು ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು.

ಸ್ವಾಭಾವಿಕವಾಗಿ ಜನ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ. ಶಾಸಕ ಸುಧಾಕರ್ ಹೇಳಿರುವುದರಲ್ಲಿ ತಪ್ಪೇನು ಇಲ್ಲ. ನಾನೂ ಅದೇ ಮಾತನ್ನು ಹೇಳುತ್ತೇನೆ.

ಐದು ವರ್ಷದ ಉತ್ತಮ ಕೆಲಸಕ್ಕಾಗಿ ಜನ ಮತ್ತೆ ಕಾಂಗ್ರೆಸ್‍ಗೆ ವೋಟ್ ಹಾಕಬೇಕಿತ್ತು. ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಬೇಕಿತ್ತು, ಆದರೆ ಹಾಗೆ ಆಗಲಿಲ್ಲ. ಜನಾದೇಶವನ್ನು ಒಪ್ಪಿಕೊಂಡಿದ್ದೇವೆ ಎಂದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಬರಲಿದೆ. ಆಗ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕು. ಸದ್ಯಕ್ಕೆ ನಾವು ಜೆಡಿಎಸ್‍ಗೆ ಬೇಷರತ್ ಬೆಂಬಲ ಕೊಟ್ಟಿದ್ದೇವೆ. ಸಮ್ಮಿಶ್ರ ಸರ್ಕಾರ ನಿರಾಂತಕವಾಗಿ ಐದು ವರ್ಷ ಪೂರೈಸಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈವರೆಗೂ ಅಧಿಕಾರ ಬದಲಾವಣೆ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ. ಸಂದರ್ಭ ಎದುರಾದರೆ ದೇವೇಗೌಡರು, ರಾಹುಲ್‍ಗಾಂಧಿಯವರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ನನಗೂ ಸಿಎಂ ಆಗಬೇಕು ಎಂಬ ಆಸೆ. ಸಿಎಂ ರೇಸ್‍ನಲ್ಲಿ ನಾನೂ ಇದ್ದೇನೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಾದರೆ ನಾನು ಇನ್ನಷ್ಟು ಕಾಲ ಕಾಯಲು ಸಿದ್ಧ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 16 ರಿಂದ 18 ಸೀಟು ಗೆಲ್ಲುತ್ತೆ. ಬಿಜೆಪಿಯವರು 22 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಮೇ 23 ರಂದು ಫಲಿತಾಂಶದ ದಿನ ಎಲ್ಲವೂ ಗೊತ್ತಾಗಲಿದೆ ಎಂದರು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ. ಕೆಲವರು ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ.

ಇನ್ನು ಕೆಲವರು ಮಾಡಿಲ್ಲ. ರಾಜ್ಯಮಟ್ಟದ ನಾಯಕರಾದ ಸಿದ್ದರಾಮಯ್ಯ, ದಿನೇಶ್‍ಗುಂಡೂರಾವ್ ಅವರು ಮಂಡ್ಯದಲ್ಲಿ ಪ್ರಚಾರ ನಡೆಸಿದ್ದಾರೆ. ಕೆಳಹಂತದ ಕಾರ್ಯಕರ್ತರು ವಿರೋಧ ಮಾಡಿದ್ದರೆ ಅದನ್ನು ಹೆಚ್ಚಾಗಿ ಗಣನೆಗೆ ತೆಗೆದುಕೊಳ್ಳಬೇಕಿಲ್ಲ ಎಂದು ಹೇಳಿದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯವರೂ ಕೂಡ ಮೈತ್ರಿ ಅಭ್ಯರ್ಥಿ ದೇವೇಗೌಡರಿಗೆ ವೋಟ್ ಹಾಕಿದ್ದಾರೆ. ದೇವೇಗೌಡರನ್ನು ಸೋಲಿಸಲು ಕಾಂಗ್ರೆಸ್ ನಾಯಕರೇ ಪ್ಲ್ಯಾನ್ ಮಾಡಿದ್ದರು ಎಂದು ಬಿಜೆಪಿ ಶಾಸಕ ಸುರೇಶ್‍ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್ ಅವರು, ಮೇ 23 ರವರೆಗೂ ಸುರೇಶ್‍ಗೌಡರು ಕಾದು ನೋಡಲಿ ಸೂಕ್ತ ಉತ್ತರ ಸಿಗಲಿದೆ ಎಂದು ತಿರುಗೇಟು ನೀಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ