ಕೇಂದ್ರ ಸಂಪುಟದಲ್ಲಿ ಲಿಂಗಾಯತರಿಗೆ ಅನ್ಯಾಯ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ,ಜೂ.3- ಕೇಂದ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತರನ್ನು ಸಂಪೂರ್ಣವಾಗಿ ಕಡೆಗಣಿಸಿ ಅವಮಾನ ಮಾಡಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.

ರಾಜ್ಯದಿಂದ 10 ಜನ ಸಂಸದರಾದರೂ ಒಬ್ಬರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಅದೂ ಕೂಡ ಸಂಪುಟ ದರ್ಜೆಯಲ್ಲ ಎಂದು ಹೇಳಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರೇಶ್ ಅಂಗಡಿ, ಪ್ರಹ್ಲಾದ ಜೋಶಿಯವರು ನಾಲ್ಕು ಬಾರಿ ಜಯಗಳಿಸಿದ್ದಾರೆ.

ಸುರೇಶ್ ಅಂಗಡಿಯವರನ್ನು ರಾಜ್ಯ ಸಚಿವರನ್ನಾಗಿ ಮಾಡಿ, ಪ್ರಹ್ಲಾದ ಜೋಶಿಯವರನ್ನು ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ಮಾಡಲಾಗಿದೆ. ಇದು ಬಿಜೆಪಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು.

ರಾಜ್ಯದಲ್ಲಿ ಸಮಿಶ್ರ ಸರ್ಕಾರ ಬಿದ್ದು ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂಬ ಸುರೇಶ ಅಂಗಡಿ ಅವರ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ಸುರೇಶ್ ಅಂಗಡಿ ಅವರು ಮೊದಲು ತಮ್ಮ ಖಾತೆ ಕುರಿತು ಚಿಂತೆ ಮಾಡಲಿ. ಸುರೇಶ್ ಅಂಗಡಿಯವರಿಗೆ ಸ್ವಾಭಿಮಾನವಿದ್ದರೆ ತಮ್ಮ ಸ್ಥಾನವನ್ನು ತಿರಸ್ಕರಿಸಲಿ. ನನಗೇನಾದರೂ ಹೀಗೆ ಆಗಿದ್ದರೆ ನಾನು ಖಂಡಿತ ತಿರಸ್ಕರಿಸುತ್ತಿದ್ದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

# ಹಿಂದಿ ಭಾಷೆ ಹೇರಿಕೆಗೆ ವಿರೋಧ:
ಯಾವುದೇ ಭಾಷೆಯನ್ನು ಹೇರುವಾಗ ವ್ಯಾಪಕವಾಗಿ ಚರ್ಚೆ ನಡೆಸಬೇಕು. ಅನಗತ್ಯವಾಗಿ ಒಂದು ಭಾಷೆಯನ್ನು ಮತ್ತೊಬ್ಬರ ಮೇಲೆ ಹೇರಬಾರದು. ಯಾವುದೇ ಭಾಷೆ ಆಯ್ಕೆಯಾಗಬೇಕು, ಹೇರಿಕೆಯಾಗಬಾರದು. ನಾಡಿನಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸಬೇಕು.

ಹಿಂದಿ ಭಾಷೆ ಹೇರಿಕೆ ಸಂಬಂಧ ವ್ಯಾಪಕವಾಗಿ ಚರ್ಚೆ ನಡೆಸಿ ಅಭಿಪ್ರಾಯ ಕ್ರೂಢೀಕರಿಸಿ ನಿರ್ಧಾರ ಕೈಗೊಳ್ಳಬೇಕು. ಏಕಾಏಕಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರ ಹೈಕಮಾಂಡ್‍ಗೆ ಬಿಟ್ಟದ್ದು, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ದೇವೇಗೌಡರು ಚರ್ಚಿಸುತ್ತಾರೆ. ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವುದೇ ಸೋಲಿಗೆ ಕಾರಣವೆಂಬುದನ್ನು ವೈಯಕ್ತಿಕವಾಗಿ ನಾನು ಒಪ್ಪುವುದಿಲ್ಲ ಎಂದು ಹೇಳಿದರು.

Facebook Comments

Sri Raghav

Admin