ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಡಮ್ಮಿ ಗ್ರೆನೇಡ್ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 31- ನಗರದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸಿಕ್ಕಿರುವ ಅನುಮಾನಾಸ್ಪದ ವಸ್ತುವಿನ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿರುವುದು ಡಮ್ಮಿ ಗ್ರೇನೆಡ್ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೂ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈ ವಸ್ತು ಎಲ್ಲಿಂದ ಬಂತು? ಹೇಗೆ ಬಂತು? ಇದನ್ನು ಇಟ್ಟವರು ಯಾರು? ಎಂಬುದೂ ಸೇರಿದಂತೆ ಸಮಗ್ರವಾಗಿ ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಸಂಪೂರ್ಣ ತನಿಖೆ ಮುಗಿದ ಬಳಿಕ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಅನುಮಾನಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ರೈಲು, ಬಸ್ಸು ನಿಲ್ದಾಣಗಳು ಸೇರಿದಂತೆ ಎಲ್ಲೇ ಆದರೂ ಸಂಶಯಾಸ್ಪದ ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಅವರು ಕೋರಿದರು.

ಬೆಳಗ್ಗೆ ರೈಲ್ವೆ ನಿಲ್ದಾಣದ ಫ್ಲಾಟ್‍ಫಾರಂ ಒಂದರಲ್ಲಿ ಡಮ್ಮಿ ಗ್ರೇನೆಡ್ ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದೊಂದು ಸ್ಫೋಟಕವಿರಬಹುದು ಎಂಬ ಭೀತಿಯಿಂದಾಗಿ ಪ್ರಯಾಣಿಕರು ದಿಕ್ಕಾಪಾಲಾಗಿ ಓಡಿದ್ದರು. ಕೂಡಲೇ ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದರು.

Facebook Comments

Sri Raghav

Admin