ಐರಿಸ್ ಬಾಕ್ಸರ್ ಕಾನರ್ ಮೆಕ್ಗ್ರೆಗರ್ ನಿವೃತ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಐರ್ಲೆಂಡ್, ಜೂ. 7- ಬಾಕ್ಸಿಂಗ್ ಲೋಕದಲ್ಲಿ ನಟೋರಿಯಸ್ ಎಂದು ಗುರುತಿಸಿಕೊಂಡಿರುವ ಐರಿಸ್ ಬಾಕ್ಸರ್ ಮೆಕ್ಗ್ರೆಗರ್ ಇಂದು ಬೆಳಗ್ಗೆ ತಮ್ಮ ನಿವೃತ್ತಿ ಘೋಷಿಸಿದ್ದಾರೆ.ಬಾಕ್ಸಿಂಗ್ ರಿಂಗ್‍ನಲ್ಲಿ ಉತ್ತಮ ಪಂಚ್‍ಗಳಿಂದ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದ ಮೆಕ್ಗ್ರೆಗರ್ 2016ರಲ್ಲೇ ನಿವೃತ್ತಿ ಘೋಷಿಸಿದ್ದರು, ಆದರೆ ಇಂದು ಮತ್ತೆ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಬಾಕ್ಸಿಂಗ್ ಲೋಕಕ್ಕೆ ಗುಡ್‍ಬೈ ಹೇಳುವ ಮೂಲಕ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

2007ರಲ್ಲಿ ಬಾಕ್ಸಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಮೆಕ್ಗ್ರೆಗರ್ ಅಮೆಚೂರ್ ಫೈಟ್‍ನಲ್ಲಿ ಕೀರೆನ್ ಕ್ಯಾಂಪೆಬಲ್ ವಿರುದ್ಧ ಗೆಲುವು ಸಾಧಿಸಿದ ನಂತರ ಸ್ಟ್ರೇಟ್ ಬ್ಲಾಸ್ಟ್ ಜಿಮ್‍ನಲ್ಲಿ ಜಾನ್ ಕವಾಗನ್ ಬಳಿ ತರಬೇತಿ ಪಡೆದರು.

2008ರಿಂದ ಮತ್ತೆ ಬಾಕ್ಸಿಂಗ್ ಲೋಕದಲ್ಲಿ ಅಗ್ರಮಾನ್ಯ ಬಾಕ್ಸರ್ ಆಗಿ ಗುರುತಿಸಿಕೊಂಡ ಮೆಕ್ಗ್ರೆಗರ್ ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‍ಷಿಪ್ ವಿಭಾಗದಲ್ಲಿ ಯುಎಫ್‍ಸಿ ಚಾಂಪಿಯನ್ ಆದ ಮೊದಲ ಐರಿಷ್ ಆಟಗಾರ ಎಂಬ ಕೀರ್ತಿಯೊಂದಿಗೆ ಪರ್ಫೆಮೆನ್ಸ್ ಆಫ್ ನೈಟ್‍ನಲ್ಲಿ 7 ಬಾರಿ ದಿಗ್ವಿಜಯ, ಮೂರು ಬಾರಿ ಮಲ್ಟಿ ಡಿವಿಷನ್ ಚಾಂಪಿಯನ್ ಸೇರಿದಂತೆ ಹಲವು ಪ್ರತಿಷ್ಠಿತ ಬಾಕ್ಸಿಂಗ್ ವಿಭಾಗದಲ್ಲಿ ಜಯದ ಮಾಲೆ ಧರಿಸಿದ್ದಾರೆ.

2017ರಲ್ಲಿ ನಡೆದ ದಿ ಮನಿ ಫೈಟ್‍ನಲ್ಲಿ ಮೆ ವೇದರ್ ವಿರುದ್ಧ ಸೆಣಸಿದ್ದ ಮೆಕ್ಗ್ರೆಗರ್ ಸೋಲು ಕಂಡಿದ್ದರು. ಅದೇ ವರ್ಷ ಅವರ ಜೀವನಾಧಾರಿತ ಕೊನೋರ್ ಮೆಕ್ಗ್ರೆಗರ್ ನಟೋರಿಯಸ್ ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ದಿ ಅಲ್ಟಿಮೇಟ್ ಫೈಟರ್ 22, ದಿ ನಟೋರಿಯಸ್, ದಿ 13 ಜಾಕಿ ಎಂಬ ಧಾರಾವಾಹಿಗಳಲ್ಲೂ ನಟಿಸಿದ್ದ ಮೆಕ್ಗ್ರೆಗರ್ ಹೆಸರಿನಲ್ಲಿ ಹಲವು ವಿಡಿಯೋ ಗೇಮ್‍ಗಳು ಅನಾವರಣಗೊಂಡಿವೆ.

ಪದೇ ಪದೇ ಗಾಯದಿಂದ ಬಳಲಿ ಬಾಕ್ಸಿಂಗ್ ರಿಂಗ್‍ನಿಂದ ಹೊರಗುಳಿಯುತ್ತಿದ್ದ ಮೆಕ್ಗ್ರೆಗರ್ 2016ರಲ್ಲಿ ಮೊದಲ ಬಾರಿಗೆ ನಿವೃತ್ತಿ ಘೋಷಿಸಿದ್ದರಾದರೂ ನಂತರವೂ ಬಾಕ್ಸಿಂಗ್ ಲೋಕದ ಸೆಳೆತದಿಂದ ಹಲವು ಪಂದ್ಯಗಳಲ್ಲಿ ಭಾಗಿಯಾಗಿದ್ದರು, ಈಗ ಮತ್ತೆ ಅವರು ತಮ್ಮ ನಿವೃತ್ತಿಯ ಬಗ್ಗೆ ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.

Facebook Comments