“ಆರ್ಥಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು ಕೆಲಸಕ್ಕೆ ಬನ್ನಿ” : ಸಾರಿಗೆ ನೌಕರರಲ್ಲಿ ಕಳಸದ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.7- ಸಂಸ್ಥೆಯ ಆರ್ಥಿಕ ಪರಿಸ್ಥಿತಿಯನ್ನು ಸಿಬ್ಬಂದಿ ಅರ್ಥ ಮಾಡಿಕೊಂಡು ಕೆಲಸಕ್ಕೆ ಹಾಜರಾಗಬೇಕು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್ ಸಾರಿಗೆ ನೌಕರರಲ್ಲಿ ಮನವಿ ಮಾಡಿದ್ದಾರೆ. ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕಳಸದ್ ಸದ್ಯ ಆರನೆ ವೇತನ ಆಯೋಗದ ಶಿಫಾರಸು ಜಾರಿ ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಆದರೂ ಮಾನವೀಯ ದೃಷ್ಟಿಯಿಂದ ಇತರೆ ಬೇಡಿಕೆಗಳನ್ನು ಈಡೇರಿಸಲು ಸಮ್ಮತಿಸಿರುವುದರಿಂದ ಮುಷ್ಕರ ವಾಪಸ್ ಪಡೆದು ಕೆಲಸಕ್ಕೆ ಬರಬೇಕೆಂದು ಹೇಳಿದ್ದಾರೆ.

ಮಾರ್ಚ್ ತಿಂಗಳ ವೇತನ ತಡೆಹಿಡಿಯುವ ವಿಚಾರ ಮಾಡಿಲ್ಲ. ಮಾರ್ಚ್ ಹಣಕಾಸು ವರ್ಷದ ಮುಕ್ತಾಯ ತಿಂಗಳು. ಹಾಗಾಗಿ ವೇತನ ತಡೆಹಿಡಿಯುವ ವಿಚಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೋವಿಡ್‍ನಿಂದಾಗಿ ಕಳೆದ ವರ್ಷವೂ ಸಂಸ್ಥೆಗೆ ನಷ್ಟವಾಗಿದೆ. ಮೂರು ತಿಂಗಳ ಹಿಂದೆ ಮುಷ್ಕರ ಮಾಡಿದಾಗ ಇನ್ನಷ್ಟು ನಷ್ಟ ಉಂಟಾಗಿದೆ.

ಈಗ ಮತ್ತೆ ನೀವು ಮುಷ್ಕರದ ಹಾದಿ ಹಿಡಿದರೆ ನಷ್ಟ ಇನ್ನೂ ಹೆಚ್ಚಾಗುತ್ತದೆಯೇ ಹೊರತು ಯಾರಿಗೂ ಲಾಭವಾಗುವುದಿಲ್ಲ. ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ, ಕೆಲಸಕ್ಕೆ ಬನ್ನಿ ಎಂದು ಕಳಸದ್ ನೌಕರರಿಗೆ ತಿಳಿಸಿದ್ದಾರೆ.

Facebook Comments