ಪೊಲೀಸರ ಕಲ್ಯಾಣಕ್ಕೆ ಸರ್ಕಾರ ಬದ್ಧ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.8- ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೊಲೀಸರು ತಮ್ಮ ಕರ್ತವ್ಯದಲ್ಲಿ ದಕ್ಷ ಮತ್ತು ಪ್ರಾಮಾಣಿಕತೆ ತೋರಿದ್ದಾರೆ. ನಕ್ಸಲ್ ನಿಗ್ರಹ, ಉಗ್ರರ ವಿರುದ್ಧ ಹೋರಾಟ ಸೇರಿದಂತೆ ಯಾವುದೇ ಬಿಕ್ಕಟ್ಟು ಎದುರಾದಾಗ ನೀವು ಪ್ರಾಣದ ಹಂಗನ್ನು ತೊರೆದು ಕೆಲಸ ಮಾಡಿದ್ದೀರಿ. ನಿಮ್ಮ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದರು. ಈಗಾಗಲೇ ರಾಜ್ಯ ಸರ್ಕಾರ ಪೊಲೀಸ್ ಗೃಹ ಯೋಜನೆಯಲ್ಲಿ ಸುಮಾರು ಎರಡೂವರೆ ಸಾವಿರ ಕೋಟಿ ವೆಚ್ಚದಲ್ಲಿ 11 ಸಾವಿರ ಸುಸಜ್ಜಿತ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತಿದೆ.

2020-25ನೇ ಸಾಲಿನ ಗೃಹ ಯೋಜನೆಯನ್ನು ಅನುಷ್ಠಾನ ಮಾಡಿದ್ದೇವೆ. ಇದರಿಂದ 2000 ಮನೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಏನೇ ಬೇಡಿಕೆಗಳಿದ್ದರೂ ಸರ್ಕಾರ ಈಡೇರಿಸಲು ಬದ್ದವಾಗಿದೆ ಎಂದು ಹೇಳಿದರು. ನಿರ್ಭಯ ಯೋಜನೆಯಡಿ ಮಹಿಳೆಯರಿಗೆ ಸುರಕ್ಷತೆ ಒದಗಿಸಲು 662 ಕೋಟಿ ಅನುದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.

ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ತುರ್ತು ಸ್ಪಂದನೆ ನೀಡುವ 150 ವಾಹನಗಳಿಗೆ ಚಾಲನೆ ಕೊಟ್ಟಿದ್ದಾರೆ. 112 ಸಂಖ್ಯೆಯ ಸಹಾಯವಾಣಿಗಳನ್ನು ತೆರೆದಿದ್ದೇವೆ. ನೀವು ಇನ್ನಷ್ಟು ಉತ್ತಮವಾದ ಕೆಲಸ ಮಾಡಬೇಕು ಎಂದರು. ಮಹಿಳೆಯರ ಸುರಕ್ಷತೆ, ನಾಗರಿಕರ ನೆಮ್ಮದಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ನಿಮ್ಮ ಮೊದಲ ಕರ್ತವ್ಯ ಎಂದು ಸಲಹೆ ಮಾಡಿದರು.

ಪ್ರಾಣದ ಹಂಗು ತೊರೆದು ಅನೇಕ ಕ್ಲಿಷ್ಟಕರ ಸಂದರ್ಭದಲ್ಲಿ ಜೀವವನ್ನೂ ಲೆಕ್ಕಿಸದೆ ಕೆಲಸ ಮಾಡಿರುವ ಪೊಲೀಸರ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಸಾಧಾರಣ ಸೇವೆ ಸಲ್ಲಿಸಿದವರನ್ನು ಗುರುತಿಸಿ ಮುಖ್ಯಮಂತ್ರಿಗಳ ಪದಕವನ್ನು ಪ್ರದಾನ ಮಾಡಲಾಗುತ್ತದೆ. ನಿಮ್ಮ ಈ ಸೇವೆ ಎಲ್ಲರಿಗೂ ಮಾದರಿಯಾಗಲಿ ಎಂದು ಆಶಿಸಿದರು.

ಇದೇ ವೇಳೆ ಅಸಾಧಾರಣ ಸೇವೆ ಸಲ್ಲಿಸಿದ 118 ಮಂದಿ ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಲಾಯಿತು. ಸಮಾಜದಲ್ಲಿ ಆಗಿಂದಾಗ್ಗೆ ಎದುರಾಗುವ ಅಪರಾಧಗಳನ್ನು ತಡೆಗಟ್ಟಲು ಮಾನಸಿಕವಾಗಿ ನೀವು ಸಿದ್ದರಾಗಿರಬೇಕು. ಇದಕ್ಕಾಗಿ ಮೂಲಭೂತ ಸೌಕರ್ಯ ಹಾಗೂ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಅವರು ಭರವಸೆ ನೀಡಿದರು.

ಈ ವೇಳೆ ಗೃಹಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

Facebook Comments