ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಾಕ್, ಶೇ.25ರಷ್ಟು ಶುಲ್ಕ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.13-ಕೋವಿಡ್ ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಶುಲ್ಕ ಏರಿಸುವ ಮೂಲಕ ಗಾಯದ ಮೇಲೆ ಬರೆ ಹಾಕಲು ಮುಂದಾಗಿದೆ.  ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗುವಂತೆ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾ ಪಡೆಯುವ ವಿದ್ಯಾರ್ಥಿಗಳಿಗೆ ಈ ಬಾರಿ ಶೇ.15ರಷ್ಟು ಹಾಗೂ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯುವವರಿಗೆ ಶೇ.25ರಷ್ಟು ಶುಲ್ಕ ಏರಿಕೆಯಾಗಲಿದೆ.

ಈ ಪ್ರಕಾರವಾಗಿ ಇನ್ನು ಮುಂದೆ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜಿನಲ್ಲಿ ಸೀಟು ಪಡೆದರೆ 1,28,000 ಶುಲ್ಕ ಭರಿಸಬೇಕು. ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರವೇಶ ಪಡೆದರೆ ಮೊದಲ ವರ್ಷದಲ್ಲಿ 9,82,000 ರೂ. ಶುಲ್ಕವನ್ನು ನೀಡಬೇಕು.

ಕಳೆದ ವರ್ಷ ಸರ್ಕಾರಿ ಕೋಟಾದಡಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ 1,11,000 ರೂ. ಇದ್ದರೆ ಖಾಸಗಿ ಕಾಲೇಜುಗಳಲ್ಲಿ 7,85,000 ರೂ. ಇತ್ತು. ಎಂಬಿಬಿಎಸ್ ಜೊತೆಗೆ ಈ ಬಾರಿ ದಂತ ವೈದ್ಯಕೀಯ ಕೋರ್ಸ್‍ಗಳ ಶುಲ್ಕವನ್ನು ಸಹ ಏರಿಕೆಯಾಗಲಿದೆ.

ಸರ್ಕಾರಿ ಕೋಟಾದ ಖಾಸಗಿ ಕಾಲೇಜಿನಲ್ಲಿ ಸೀಟು ಪಡೆದರೆ ಮೊದಲ ವರ್ಷಕ್ಕೆ 83,357 ರೂ. ಶುಲ್ಕ (ಕಳೆದ ವರ್ಷ 72,484 ರೂ.) ಹಾಗೂ ಖಾಸಗಿ ಕಾಲೇಜುಗಳಲ್ಲಿ 6, 60,000 ಶುಲ್ಕ ( ಕಳೆದ ವರ್ಷ 5,32,00 ರೂ.) ಪಾವತಿಸಬೇಕು.

ರಾಜ್ಯದಲ್ಲಿ ಒಟ್ಟು 25 ಖಾಸಗಿ ವೈದ್ಯಕೀಯ ಕಾಲೇಜುಗಳಿದ್ದು, ಕಾಲೇಜು ನಿರ್ವಹಣೆ, ಸಿಬ್ಬಂದಿ ವೇತನ, ಮೂಲಭೂತ ಸೌಕರ್ಯಗಳು ಸೇರಿದಂತೆ ಆರ್ಥಿಕ ಹೊರೆಯಾಗುತ್ತಿರುವುದನ್ನು ಸರಿದೂಗಿಸಲು ಶೇ.30ರಷ್ಟು ಶುಲ್ಕ ಹೆಚ್ಚಳ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

Facebook Comments