ವೈದ್ಯಕೀಯ ಪರೀಕ್ಷೆಗಳು ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.29- ವೈದ್ಯಕೀಯ ಪರೀಕ್ಷೆಗಳು ಮುಂದೂಡಿಕೆಯಾಗಿದ್ದು, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಅಂತಿಮ ವರ್ಷದ ವೈದ್ಯಕೀಯ ಪದವಿ ಪರೀಕ್ಷೆಗಳನ್ನು ಮುಂದಿನ ವರ್ಷ ಮಾರ್ಚ್ ಕೊನೆಯಲ್ಲಿ ನಡೆಸಲು ದಿನಾಂಕ ನಿಗದಿಪಡಿಸಿದೆ.  ಎಂಬಿಬಿಎಸ್ ಮೊದಲ ವರ್ಷದ ವಾರ್ಷಿಕ ಪರೀಕ್ಷೆಯನ್ನು ಫೆಬ್ರವರಿಯಲ್ಲಿ ಉಳಿದಂತೆ ದ್ವಿತೀಯ ಮತ್ತು ತೃತೀಯ ವರ್ಷದ ವಾರ್ಷಿಕ ಪರೀಕ್ಷೆಗಳನ್ನು ಮಾರ್ಚ್-ಏಪ್ರಿಲ್‍ನಲ್ಲಿ ನಡೆಸಲು ತೀರ್ಮಾನಿಸಿದೆ.

ಜನವರಿ 19ರಿಂದ ಎಲ್ಲ ವೈದ್ಯಕೀಯ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಸುತ್ತೋಲೆ ಹೊರಡಿಸಿತ್ತು. ಆದರೆ, ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಓದಲು ಸಾಧ್ಯವಾಗದೆ ಆತಂಕಕ್ಕೊಳಗಾಗಿ ಹೆಚ್ಚಿನ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜನವರಿಯಲ್ಲಿ ಆರಂಭವಾಗಬೇಕಿದ್ದ ಪರೀಕ್ಷೆಗಳನ್ನು ಮಾರ್ಚ್‍ಗೆ ಮುಂದೂಡಿದೆ. ವೈದ್ಯಕೀಯ ಅಂತಿಮ ವರ್ಷದ ಪರೀಕ್ಷೆಗಳನ್ನು 2021ನೇ ಮಾರ್ಚ್-ಏಪ್ರಿಲ್‍ನಲ್ಲಿ ನಿಗದಿಪಡಿಸಿ ಪರಿಷ್ಕøತ ವೇಳಾಪಟ್ಟಿ ಪ್ರಕಟಿಸಿದೆ.

ಇದರನ್ವಯ ಎಂಬಿಬಿಎಸ್‍ನ ಮೊದಲ ವರ್ಷದ ವಾರ್ಷಿಕ ಪರೀಕ್ಷೆಯೂ ಫೆಬ್ರವರಿಯಲ್ಲಿ ಹಾಗೂ ದ್ವಿತೀಯ , ತೃತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಮಾರ್ಚ್ ಏಪ್ರಿಲ್‍ನಲ್ಲಿ ನಡೆಸಲು ವಿವಿ ತೀರ್ಮಾನಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಪಾಠ ಪ್ರವಚನಗಳನ್ನು ಆನ್‍ಲೈನ್‍ನಲ್ಲೇ ಮಾಡಲಾಗಿತ್ತು.

ಈ ವರ್ಷ ಒಂದು ದಿನವೂ ಕಾಲೇಜಿನ ಪ್ರಾಯೋಗಿಕ ತರಗತಿಗಳಿಗೆ ವಿದ್ಯಾರ್ಥಿಗಳು ಹೋಗಿರಲಿಲ್ಲ. ಲಾಕ್‍ಡೌನ್ ತೆರವಾದ ಹಿನ್ನೆಲೆಯಲ್ಲಿ ಡಿಸೆಂಬರ್ 1 ರಿಂದ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿದ್ದು, ಜನವರಿ ಎರಡನೇ ವಾರವೇ ಪರೀಕ್ಷೆಯನ್ನು ಘೋಷಿಸಿತ್ತು.

ಡಿಸೆಂಬರ್ ತಿಂಗಳು ಪೂರ್ತಿ ಪ್ರಾಯೋಗಿಕ ತರಗತಿಗಳು ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಓದಲು ಮತ್ತು ರಿವಿಷನ್ ಮಾಡಲು ಅವಕಾಶವೇ ಇರಲಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೊಳಗಾಗಿದ್ದರು. ಹಲವು ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೊಳಗಾಗಿದ್ದರು. ಪರೀಕ್ಷೆಯನ್ನು ಮುಂದೂಡಬೇಕೆಂದು ವಿಶ್ವವಿದ್ಯಾಲಯದ ಮೇಲೆ ಒತ್ತಡ ತಂದಿದ್ದರು. ಈ ಸಂಬಂಧ “ಈ ಸಂಜೆ” ಶನಿವಾರ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಈಗ ರಾಜೀವ್‍ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಯನ್ನು ಮುಂದೂಡಿದ್ದು, ವಿದ್ಯಾರ್ಥಿಗಳಿಗೆ ಕೊಂಚ ನಿರಾಳವಾದಂತಾಗಿದೆ. ತರಗತಿಗಳಿಗೆ ಅಟೆಂಡ್ ಮಾಡಲು ಓದಲು ಸಮಯಾವಕಾಶ ಸಿಕ್ಕಂತಾಗಿದೆ.

Facebook Comments