ಮೆಡಿಕಲ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಖಿನ್ನತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.28- ವೈದ್ಯಕೀಯ ಶಿಕ್ಷಣದಂತಹ ಮಹತ್ವದ ವಿಷಯ ವನ್ನು ಕೇವಲ ಆನ್‍ಲೈನ್‍ನಲ್ಲೇ ಕಲಿತಿರುವ ವಿದ್ಯಾರ್ಥಿಗಳಿಗೆ ದುತ್ತನೇ ಪರೀಕ್ಷೆ ಎದುರಾಗಿರುವುದು ದಿಕ್ಕುತೋಚದಂತಾಗಿದ್ದು, ತಮ್ಮ ಭವಿಷ್ಯದ ಚಿಂತೆಯಿಂದ ಖಿನ್ನತೆಗೆ ಒಳಗಾಗಿದ್ದಾರೆ.  ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ವೈದ್ಯಕೀಯ ಕೋರ್ಸ್‍ಗಳ ಎಲ್ಲಾ ತರಗತಿಗಳಿಗೂ ಆನ್‍ಲೈನ್‍ನಲ್ಲೇ ಬೋಧನೆ ಮಾಡಿರುವುದರಿಂದ ಪ್ರಾಯೋಗಿಕ ತರಬೇತಿಯಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ.

ಒಂದು ದಿನವೂ ಕಾಲೇಜು ಅಥವಾ ಆಸ್ಪತ್ರೆಗೆ ಕಾಲಿಡದ ವಿದ್ಯಾರ್ಥಿಗಳಿಗೆ ಈಗ ಏಕಾಏಕಿ ಪರೀಕ್ಷೆ ಎದುರಾಗಿರುವುದರಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಮನೆಯಲ್ಲಿಯೇ ಕುಳಿತು ಆನ್‍ಲೈನ್‍ನಲ್ಲೇ ಪಾಠ ಕೇಳಿದ ವಿದ್ಯಾರ್ಥಿಗಳು ತಾವೇ ಅದನ್ನು ಮನನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಿಸಬೇಕಿತ್ತು. ಡಿ.1ರಿಂದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ತರಗತಿಯನ್ನು ಪ್ರಾರಂಭಿಸುವುದಾಗಿ ಸರ್ಕಾರ ಹೇಳಿದೆ. ಆದರೆ ಅಲ್ಲಿ ಥಿಯರಿ ತರಗತಿಗಳು ನಡೆಯುವುದಿಲ್ಲ. ಕೇವಲ ಪ್ರಾಕ್ಟಿಕಲ್ ತರಗತಿಗಳು ಮಾತ್ರ ನಡೆಯುತ್ತವೆ.

45 ದಿನಗಳ ಕಾಲ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪ್ರಾಕ್ಟಿಕಲ್ ತರಗತಿಗಳನ್ನು ನಡೆಸಿ ನೇರವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದೆ. ಹೀಗಾದರೆ ನಮಗೆ ಓದಲು ಸಮಯವೆಲ್ಲಿದೆ. ಕನಿಷ್ಠ ಒಂದು ತಿಂಗಳಾದರೂ ಸಮಯಾವಕಾಶ (ಸ್ಟೆಡಿ ಹಾಲಿಡೆ) ಕೊಡಬೇಕು. ಆದರೆ ವಿಶ್ವವಿದ್ಯಾಲಯ ಏಕಾಏಕಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಿರುವುದರಿಂದ ನಾವು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇವೆ.

ವೈದ್ಯರಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಓದಿ ನೀಟ್ ಪರೀಕ್ಷೆ ಬರೆದು ವೈದ್ಯಕೀಯ ಕೋರ್ಸ್ ಸೇರಿದ್ದೇವೆ. ಆದರೆ ಯಾವುದೇ ಪ್ರಾಯೋಗಿಕ ತರಬೇತಿ ಇಲ್ಲದೆ ಥಿಯರಿ ಕ್ಲಾಸ್‍ಗಳಿಲ್ಲದೆ ಆನ್‍ಲೈನ್‍ನಲ್ಲೇ ನಡೆಸಿದ ಕ್ಲಾಸ್‍ಗಳಿಂದ ನಾವೀಗ ಪರೀಕ್ಷೆ ಬರೆಯಬೇಕಾದ ಒತ್ತಡಕ್ಕೆ ಸಿಲುಕಿದ್ದೇವೆ ಎಂದು ಅಳಲು ತೋಡಿಕೊಂಡಿರುವ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದಾರೆ.

ಐಎಎಸ್, ಐಪಿಎಸ್, ಪಿಎಚ್‍ಡಿ ಮುಂತಾದ ಉನ್ನತ ಶಿಕ್ಷಣ ಕೋರ್ಸ್ ಗಳಾದರೆ ಮನೆಯಲ್ಲಿ ಕುರಿತು ಅಧ್ಯಯನ ಮಾಡಿ ಪರೀಕ್ಷೆ ಬರೆದು ಪಾಸ್ ಮಾಡಬಹುದು. ಆದರೆ ವೈದ್ಯಕೀಯ ವಿದ್ಯಾರ್ಥಿಗಳು ಪ್ರಾಕ್ಟಿಕಲ್ ತರಬೇತಿಗಳಿಲ್ಲದೆ ಪರೀಕ್ಷೆ ಬರೆಯಲು ಸಾಧ್ಯವೇ ಇಲ್ಲ. ಕೊರೊನಾ ಕಾರಣದಿಂದ ಈ ಸಾಲಿನ ಎಂಬಿಬಿಎಸ್ ತರಬೇತಿಗಳಲ್ಲಿ ಏರುಪೇರಾಯಿತು ನಿಜ.

ಶಿಕ್ಷಣ ಆನ್‍ಲೈನ್‍ನಲ್ಲಿ ಮುಂದುವರೆಯಿತು. ಪ್ರಯೋಗಾಲಯದಲ್ಲಿ ಮೈಕ್ರೋ ಸ್ಕೋಪ್‍ಗಳೊಂದಿಗೆ ಫೀಲ್ ಮಾಡುತ್ತ ಡಿಸೆಕ್ಷನ್ ಮಾಡಿ ಡೆಡ್ ಬಾಡಿ ಟಚ್ ಮಾಡುತ್ತಾ ಪ್ರಯೋಗಾಲಯದಲ್ಲಿ ವೈದ್ಯಕೀಯ ಅಧ್ಯಯನ ಮಾಡಬೇಕಾಗಿದ್ದ ವಿದ್ಯಾರ್ಥಿಗಳು ಕೊರೊನಾ ಎಫೆಕ್ಟ್‍ನಿಂದ ತರಗತಿಗಳಿಗೆ ಹೋಗಲಾಗಲಿಲ್ಲ. ಲಾಕ್‍ಡೌನ್ ತೆರವಾದ ಹಿನ್ನೆಲೆಯಲ್ಲಿ ಸರ್ಕಾರ ಡಿಸೆಂಬರ್ 1ರಿಂದ ತರಗತಿಯನ್ನು ಪ್ರಾರಂಭಿಸಲು ಸೂಚಿಸಿದೆ. ಅದರ ಜೊತೆಗೆ ಜನವರಿ 19ರಿಂದಲೇ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಆನ್‍ಲೈನ್ ನಲ್ಲಿ ನಡೆದ ತರಗತಿಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆಟ್‍ವರ್ಕ್ ಪಜೀತಿ ಅಷ್ಟಿಷ್ಟಲ್ಲ. ಸರಿಯಾಗಿ ಅವರು ಪಾಠ ಮನನ ಮಾಡಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಕನಿಷ್ಟ ರಿವಿಜನ್ ಆದರೂ ಮಾಡಲು ವಿಶ್ವವಿದ್ಯಾಲಯ ಅವಕಾಶ ಕಲ್ಪಿಸಬೇಕು. ಏಕಾಏಕಿ 45 ದಿನದೊಳಗೆ ಪರೀಕ್ಷೆ ಘೋಷಣೆ ಮಾಡಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳು ಒತ್ತಡದಿಂದ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆ. ನಾವು ವೈದ್ಯರಾಗುವ ಕನಸು ಏನಾಗುತ್ತದೋ ಏನೋ ಂದು ಹಲವು ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ.

ಈ ವರ್ಷ ಕೇವಲ ಆನ್‍ಲೈನ್ ತರಗತಿಗಳು ನಡೆಯುತ್ತಿದ್ದು, ಆಸ್ಪತ್ರೆಗೆ ಹೋಗಿಲ್ಲ. ಜನವರಿಯಲ್ಲಿ ಪರೀಕ್ಷೆ ನಿಗದಿಪಡಿಸಿರುವುದರಿಂದ ಆತಂಕ ಎನಿಸುತ್ತಿದೆ ಎಂದು ಹೆಸರು ಹೇಳಲಿಚ್ಚಿಸಿದ ಅನೇಕ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮುಂದಿನ ವರ್ಷದಿಂದ ವೃತ್ತಿ ಜೀವನ ಆರಂಭಿಸುವ ಅಂತಿಮ ವರ್ಷದ ವಿದ್ಯಾರ್ಥಿಗಳ ಭವಿಷ್ಯದ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಇನ್ನೂ ಪ್ರಾಯೋಗಿಕ ಪರೀಕ್ಷೆಯನ್ನೂ ಕೂಡ ಆನ್‍ಲೈನ್‍ನಲ್ಲಿ ಕೇಸ್ ಸ್ಟಡಿ ನಡೆಸಲು ತೀರ್ಮಾನಿಸಿದೆ. ಈ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳು ಯಾವುದೇ ರೀತಿಯ ಪ್ರಾಯೋಗಿಕ ಅನುಭವ ಇಲ್ಲದೆ ಪದವಿ ಪಡೆದಂತಾಗುತ್ತದೆ. ಇನ್ನೂ ಪರೀಕ್ಷೆ ತೇರ್ಗಡೆಯಾದ ನಂತರ ಅಂತಿಮ ವರ್ಷದ ವಿದ್ಯಾರ್ಥಿಗಳು ನೇರವಾಗಿ ರೋಗಿಗಳ ತಪಾಸಣೆಗೆ ಅರ್ಹರಾಗಿರುತ್ತಾರೆ. ಇವರಿಗೆ ಪ್ರಾಯೋಗಿಕ ಪಾಠ ಇಲ್ಲದಿರುವುದು ಸಾಕಷ್ಟು ತೊಡಕಾಗಲಿದೆ. ಯಾವುದೇ ಪರೀಕ್ಷೆ ನಡೆಸಲು ಕನಿಷ್ಠ 2 ತಿಂಗಳು ಅವಕಾಶ ಇರಬೇಕು.

ಆದರೆ 45 ದಿನದಲ್ಲಿ ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಿರುವುದರಿಂದ ವಿದ್ಯಾರ್ಥಿಗಳು ದಿಗ್ಬ್ರಾಂತರಾಗಿದ್ದಾರೆ.ಕನಿಷ್ಟ ಒಂದು ತಿಂಗಳಾದರೂ ಪರೀಕ್ಷೆಯನ್ನು ಮುಂದೂಡಬೇಕು. ಓದಲು ಅವಕಾಶ ನೀಡಬೇಕು, ಪ್ರಾಕ್ಟಿಕಲ್ ತರಗತಿಗಳ ಜೊತೆಗೆ ಥಿಯರಿ ತರಗತಿಗಳನ್ನು ನಡೆಸಬೇಕು. ಈಗಾಗಲೇ ಆನ್‍ಲೈನ್ ತರಗತಿಗಳು ನಡೆದಿದ್ದು, ಪುನರಾವರ್ತನೆಯನ್ನಾದರೂ ಮಾಡಬೇಕು. ಆಗ ನಾವು ತಿಳಿದಿರುವ ವಿಷಯದ ಸ್ಪಷ್ಟತೆ ದೊರೆಯಲಿದೆ.

ಮಹಾತ್ವಾಕಾಂಕ್ಷೆಯಿಂದ ವೈದ್ಯಕೀಯ ಕೋರ್ಸ್‍ಗಳಿಗೆ ಸೇರಿದ್ದೇವೆ. ಓದಬೇಕೆಂಬ ತೀವ್ರ ಹಂಬಲವಿದೆ. ತರಾತುರಿಯಲ್ಲಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದು ಬೇಡ. ಸರ್ಕಾರ ಮನಸ್ಸು ಮಾಡಿದರೆ ಪರೀಕ್ಷೆಯನ್ನು ಮುಂದೂಡಬಹುದು ಎಂದಿದ್ದಾರೆ.  ಡಿಸೆಂಬರ್ 1ರಿಂದ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಲಿದ್ದು, ಹೆಚ್ಚು ಪ್ರಾಯೋಗಿಕ ತರಗತಿಗಳಿಗೆ ಆದ್ಯತೆ ನೀಡಲಾಗುವುದು ಎಂದು ರಾಜೀವ್‍ಗಾಂಧಿ ವಿಶ್ವವಿದ್ಯಾಲಯ ಹೇಳಿದೆ. ಡಿಸೆಂಬರ್ ಪೂರ್ತಿ ಪ್ರಾಯೋಗಿಕ ತರಗತಿಗಳೇ ನಡೆದು ಜನವರಿಯಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಜ್ಜಾಗಬೇಕಾದರೆ ಕಷ್ಟವಾಗುತ್ತದೆ. ಹೀಗಾಗಿ ಪರೀಕ್ಷೆಯನ್ನು ಮುಂದೂಡಿ ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

ಭವಿಷ್ಯದಲ್ಲಿ ಜನರ ಆರೋಗ್ಯದ ಜವಾಬ್ದಾರಿ ಹೊತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ಬಹಳ ಪ್ರಮುಖವಾಗಿ ರುತ್ತದೆ. ವೈದ್ಯಕೀಯ ಕೋರ್ಸ್‍ನ ಪ್ರಾರಂಭದಿಂದಲೂ ಕೊನೆಯವರೆಗೂ ಕೂಡ ರೋಗಿಗಳೊಂದಿಗೆ ಸಂಪರ್ಕದೊಂದಿಗೆ ತರಗತಿಗಳು ನಡೆಯುತ್ತಿರುತ್ತವೆ. ಆದರೆ ಕಳೆದ 9 ತಿಂಗಳಿನಿಂದ ರಾಜ್ಯದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಆದ್ಯತೆ ನೀಡಿರುವುದರಿಂದ ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಪ್ರಸಕ್ತ ಶೈಕ್ಷಣಿಕ ವರ್ಷ ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ಮಾತ್ರ ನಡೆಯುತ್ತಿವೆ. ಹಾಗಾಗಿ ಪದವಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿಲ್ಲ.

ಯಾವುದೇ ರೋಗಿಗೆ ಮುಖಾಮುಖಿ ತಪಾಸಣೆ ನಡೆಸಿಲ್ಲ. ಪ್ರಾಯೋಗಿಕವಾಗಿ ತರಗತಿಗಳಿಂದ ವಂಚಿತವಾಗಿರುವುದು ನಿಜ. ಈಗ ಏಕಾಏಕಿ ತರಗತಿಗಳನ್ನು ನಡೆಸಲು ಮುಂದಾಗಿರುವುದಲ್ಲದೆ ದಿಢೀರ್ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿರುವುದರಿಂದ ಒತ್ತಡ ಹೆಚ್ಚಾಗಿದೆ ಎಂಬ ಆರೋಪ ವಿದ್ಯಾರ್ಥಿಗಳು ಹಾಗೂ ಫೋಷಕರಿಂದ ಕೇಳಿ ಬಂದಿದೆ.

Facebook Comments