ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ, 42 ಕಂಪೆನಿಗಳಿಂದ ನೇರ ನೇಮಕಾತಿ..!
ಬೆಂಗಳೂರು, ಸೆ.3- ಉದ್ಯೋಗ ಮಾಡುವ ಮನಸ್ಸಿರುವ ಯುವಜನರಿಗೆ ಸರ್ಕಾರವೇ ಕೌಶಲ್ಯ ತರಬೇತಿ ನೀಡಿ ಉದ್ಯೋಗವೂ ಸಿಗುವಂತೆ ಮಾಡುತ್ತಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿಂದು ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ಮಹಾನಗರ ಹಾಗೂ ಕರ್ನಾಟಕದಲ್ಲಿ ಉದ್ಯೋಗಗಳಿಗೆ ಕೊರತೆ ಇಲ್ಲ. ವಿಫುಲ ಉದ್ಯೋಗಾವಕಾಶಗಳು ಲಭ್ಯವಿದ್ದು, ಕೆಲಸ ಮಾಡಲು ಯುವಜನರು ಮುಂದೆ ಬರಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ಕುಶಲ ಸಂಪನ್ಮೂಲ ಒದಗಿಸುವುದು ಸರ್ಕಾರದ ಉದ್ದೇಶ. ಈ ನಿಟ್ಟಿನಲ್ಲಿ ಎಷ್ಟೇ ಪ್ರಮಾಣದ ಉದ್ಯೋಗಾಂಕ್ಷಿಗಳು ಬಂದರೂ ಸೂಕ್ತ ತರಬೇತಿ, ಭಾಷಾಜ್ಞಾನ, ಕೌಶಲ್ಯ ಕಲಿಸಿ ಕೆಲಸ ಕೊಡಿಸಲಾಗುವುದು. ಕುಶಲತೆ ರೂಢಿಸಿಕೊಳ್ಳದ ಹೊರತು ಉದ್ಯೋಗದ ಪ್ರಶ್ನೆ ಬರುವುದಿಲ್ಲ ಎಂದು ಅವರು ಹೇಳಿದರು.
ವಿದೇಶಗಳಲ್ಲಿ ಕೆಲಸ ಮಾಡಲು ಅವಕಾಶವಿದೆ. ಸರಕಾರ ಅಂತಾರಾಷ್ಟ್ರೀಯ ವಲಸೆ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಅದರ ಮೂಲಕ ರಾಜ್ಯದ ಕುಶಲ ಯುವಜನರಿಗೆ ಹೊರ ದೇಶಗಳಲ್ಲೂ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಅನೇಕರು ಉದ್ಯೋಗ ಪಡೆದುಕೊಂಡು ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆಂದು ಅವರು ಹೇಳಿದರು.
# ಬೃಹತ್ ಜಾಬ್ ಮೇಳ:
ಈ ಉದ್ಯೋಗ ಮೇಳದಲ್ಲಿ 2,000ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯ ಇವೆ. ಆದರೆ ನೋಂದಣಿ ಮಾಡಿಕೊಂಡಿರುವುದು 1300 ಉದ್ಯೋಗಾಕಾಂಕ್ಷಿಗಳು ಮಾತ್ರ. 30 ಕಂಪೆನಿಗಳು ನೇರವಾಗಿ, ಅಂದರೆ ಭೌತಿಕವಾಗಿ ಅಭ್ಯರ್ಥಿಗಳನ್ನು ಸ್ಥಳದಲ್ಲಿಯೇ ಆಯ್ಕೆ ಮಾಡಿಕೊಳ್ಳುತ್ತಿವೆ. ಇನ್ನೂ 12 ಕಂಪನಿಗಳು ಆನ್ಲೈನ್ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿವೆ. ಒಟ್ಟು 42 ಕಂಪೆನಿಗಳು ಈ ಮೇಳದಲ್ಲಿ ಭಾಗಿಯಾಗಿವೆ ಎಂದು ಸಚಿವರು ಹೇಳಿದರು.
ಇವೆಲ್ಲ ದೇಶದ ಪ್ರತಿಷ್ಟಿತ ಕಂಪೆನಿಗಳಾಗಿದ್ದು, ನಮ್ಮ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿವೆ. ಇಂಥ ಕಂಪೆನಿಗಳಲ್ಲಿ ಅವಕಾಶ ಸಿಕ್ಕಿದ ಮೇಲೆ ಉತ್ತಮವಾಗಿ ಕೆಲಸ ಮಾಡಿ ಹಾಗೂ ನೀವು ಬೆಳೆಯುವುದರ ಜತೆಗೆ ಕಂಪೆನಿಯನ್ನೂ ಬೆಳೆಸಿ ಆ ಮೂಲಕ ಆರ್ಥಿಕ ವೃದ್ಧಿಗೆ ಕಾಣಿಕೆ ನೀಡಿ ಎಂದು ಸಚಿವರು ಉದ್ಯೋಗಾಂಕ್ಷಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ಗೌಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಕಾರಿ ಕೃಷ್ಣಮೂರ್ತಿ ಸೇರಿದಂತೆ ಅನೇಕ ಅಕಾರಿಗಳು, ವಿವಿಧ ಕಂಪೆನಿಗಳ ಅಕಾರಿಗಳು ಹಾಜರಿದ್ದರು.