ಹವಾ ಮುನ್ಸೂಚನೆ ನೀಡುವ ‘ಮೇಘ ಸಂದೇಶ’ ಆ್ಯಪ್ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.6- ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು, ಹವಾ ಮುನ್ಸೂಚನೆಗೆ ಸಂಬಂಧಿಸಿದ ಬೆಂಗಳೂರು ಮೇಘ ಸಂದೇಶ ಎಂಬ ಮೊಬೈಲ್ ಆ್ಯಪ್ ಹಾಗೂ ವರುಣಮಿತ್ರ ಅಂತರ್ಜಾಲ ತಾಣಕ್ಕೆ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದರು. ಬೆಂಗಳೂರು ನಗರದ ನಿಗದಿತ ವಲಯವಾರು ಪ್ರದೇಶಕ್ಕೆ ಅನ್ವಯವಾಗುವ ಮಳೆ ಮುನ್ಸೂಚನೆ, ಪ್ರವಾಹ ಮುನ್ನೆಚ್ಚರಿಕೆಗಳನ್ನು ನೀಡಲು ಬೆಂಗಳೂರು ಮೇಘ ಸಂದೇಶ ಎಂಬ ಮೊಬೈಲ್ ಆಪ್‍ನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಆ್ಯಪ್‍ನ ವಿನ್ಯಾಸ, ವೈಶಿಷ್ಟ್ಯ ಹಾಗೂ ಇದರಲ್ಲಿ ಒದಗಿಸಲಾಗುತ್ತಿರುವ ಮಾಹಿತಿಗಳು ಅನನ್ಯ. ಈ ಮಾಹಿತಿಯನ್ನುwww.varunamitra.kar.gov.in ಮೂಲಕವೂ ನೀಡಲಾಗುತ್ತಿದೆ.  ಈಗಾಗಲೇ ರಚಿಸಲಾಗಿರುವ ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಕೋರ್ ಗ್ರೂಪ್‍ಗಳಿಗೆ, ರಾಜ್ಯಮಟ್ಟದ ಹಿರಿಯ ಅಧಿಕಾರಿಗಳ ಕೋರ್ ಗ್ರೂಪ್, ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಈ ಮಾಹಿತಿ ಆಧರಿಸಿ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ಹಾಗೂ ಸಂಭವನೀಯ ಹಾನಿಯನ್ನು ತಗ್ಗಿಸಲು ಅಗತ್ಯ ಕ್ರಮಕೈಗೊಳ್ಳಲು ಸಲಹೆಸೂಚನೆ ನೀಡಲಾಗುತ್ತಿದೆ.

ಆ್ಯಪ್‍ನ ಮೂಲಕ ನೀಡಲಾಗುತ್ತಿರುವ ಮಾಹಿತಿಯು, ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಅಳವಡಿಸಿ ಕಾರ್ಯಗತಗೊಳಿಸಿರುವ 100 ದೂರಸ್ಥ ಮಳೆ ಮಾಪನ ಕೇಂದ್ರಗಳು, 12 ದೂರಸ್ಥ ಹವಾಮಾನ ಮಾಪನ ಕೇಂದ್ರಗಳು ಹಾಗೂ 25 ಹರಿವುಮಾಪನ ಕೇಂದ್ರಗಳಿಂದ ನೈಜ ಸಮಯದಲ್ಲಿ ಲಭ್ಯವಾಗುವ ದತ್ತಾಂಶವನ್ನು ಆಧರಿಸಿರುತ್ತದೆ.

ಆ್ಯಪ್‍ನ ವಿನ್ಯಾಸ: ಈ ಆ್ಯಪ್‍ನಲ್ಲಿ ಪ್ರಸ್ತುತ ಹವಾಮಾನ, ಮುನ್ಸೂಚನೆ ಮತ್ತು ಸುರಕ್ಷಿತ ಮಾರ್ಗ ಎಂಬ ಮೂರು ಪ್ರಧಾನ ಮಾಡ್ಯೂಲ್‍ಗಳನ್ನು ಒಳಗೊಂಡಿದೆ. ಪ್ರಸ್ತುತ ಹವಾಮಾನ ಟ್ಯಾಬ್ ನಿಗದಿತ ಪ್ರದೇಶದ ಪ್ರಸ್ತುತ ಉಷ್ಣಾಂಶ, ಆಧ್ರ್ರತೆ, ಮಳೆ ಪ್ರಮಾಣ, ಗಾಳಿಯ ವೇಗ ದಿಕ್ಕುಗಳ ಮಾಹಿತಿಯನ್ನು ನೀಡುತ್ತದೆ. ಮುನ್ಸೂಚನೆ ಟ್ಯಾಬ್ ನಿಗದಿತ ಪ್ರದೇಶಕ್ಕೆ ಅನುಗುಣವಾಗಿ ಮುಂದಿನ ಮೂರು ದಿನಗಳಿಗೆ ಉಷ್ಣಾಂಶ, ಆಧ್ರ್ರತೆ, ಮಳೆ ಪ್ರಮಾಣ, ಗಾಳಿಯ ವೇಗ ಹಾಗೂ ಮೋಡದ ಕುರಿತು ಮುನ್ಸೂಚನೆ ನೀಡುತ್ತದೆ.

ಸುರಕ್ಷಿತ ಮಾರ್ಗ: ಸುರಕ್ಷಿತ ಮಾರ್ಗ ಟ್ಯಾಬ್ ನಿರ್ದಿಷ್ಟ ಸ್ಥಳದಿಂದ ತಲುಪಬೇಕಿರುವ ಸ್ಥಳಗಳ ನಡುವೆ ಸಂಚರಿಸಲು ಪ್ರವಾಹದಿಂದ ಯಾವುದೇ ಅಡಚಣೆಯಿಲ್ಲದೆ ಸುರಕ್ಷಿತ ಮಾರ್ಗವನ್ನು ಸೂಚಿಸುತ್ತದೆ. ಪ್ರಸ್ತುತ ಗುಡುಗು ಸಿಡಿಲು ಹಾಗೂ ಮಳೆ ಪಲ್ಸ್ ರಾಡ್ ಟ್ಯೂಬ್ ಸಿಡಿಲು ಆ್ಯಪ್‍ಗೆ ಸಂಪರ್ಕ ಕಲ್ಪಿಸಿ ನಿಗದಿತ ಪ್ರದೇಶಕ್ಕೆ ಸಂಭವನೀಯ ಗುಡುಗು ಸಿಡಿಲಿನ ಮುನ್ನೆಚ್ಚರಿಕೆ ನೀಡುತ್ತಿದೆ. ಟ್ಯಾಬ್ ಕೇಸರಿ ಅಥವಾ ಕೆಂಪು ಬಣ್ಣದಲ್ಲಿದ್ದರೆ ಆ ಪ್ರದೇಶದಲ್ಲಿ ಮುಂದಿನ 30-45 ನಿಮಿಷದಲ್ಲಿ ಸಿಡಿಲು ಬಡಿತದ ಸಂಭವನೀಯತೆಯನ್ನು ಸೂಚಿಸುತ್ತದೆ.

ಅದಲ್ಲದರೆ ಆಪ್ರದೇಶದ ವ್ಯಕ್ತಿ ಅಥವಾ ಸಮುದಾಯಗಳು ಸಿಡಿಲಿನ ಅಪಾಯದಿಂದ ತಪ್ಪಿಸಿಕೊಳ್ಳಲು ಉಪಯುಕ್ತ ಸಲಹೆ ಸೂಚನೆಯನ್ನು ನೀಡುತ್ತದೆ.ಪ್ರಸ್ತುತ ಮಳೆ/ಪ್ರವಾಹ ಟ್ಯಾಬ್‍ನಲ್ಲಿ ಹತ್ತಿರದ ಮಳೆ ಮಾಪನ ಕೇಂದ್ರದ ಮಾಹಿತಿಯನ್ನಾಧರಿಸಿ ಆ ಪ್ರದೇಶದಲ್ಲಾಗುತ್ತಿರುವ ಮಳೆ ಮಾಹಿತಿಯನ್ನು ನೀಡುತ್ತದೆ. ಪ್ರವಾಹ ಬಟನ್ ಆ ಪ್ರದೇಶದ ಹಾಗೂ ಸುತ್ತಮುತ್ತಲಿನ ಪ್ರದೇಶದ ಪ್ರಸ್ತುತ ಪ್ರವಾಹ ಪರಿಸ್ಥಿತಿಯ ಮಾಹಿತಿಯನ್ನು ನೀಡುತ್ತದೆ. ಈಟ್ಯಾಬ್ ನೀಲಿ ಬಣ್ಣದಲ್ಲಿದ್ದರೆ ಅದು ಆ ಪ್ರದೇಶದಲ್ಲಿ ಪ್ರಸ್ತುತ ಮಳೆಯಾಗುತ್ತಿರುವುದನ್ನು ಸೂಚಿಸುತ್ತದೆ.

ಸುರಕ್ಷತಾ ಸಲಹೆ ಟ್ಯಾಬ್‍ನಲ್ಲಿ ಮಳೆ ಅಥವಾ ಪ್ರವಾಹದ ಸಂದರ್ಭಗಳಲ್ಲಿ ಆ ಪ್ರದೇಶದ ವ್ಯಕ್ತಿ ಅಥವಾ ಸಮುದಾಯ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತದೆ. ತುರ್ತು ಪರಿಸ್ಥಿತಿ ಟ್ಯಾಬ್ ಅಗತ್ಯಕ್ಕೆ ಅನುಗುಣವಾಗಿ ಸಾರ್ವಜನಿಕರು ಬಿಬಿಎಂಪಿ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.
ಈ ಆ್ಯಪ್‍ನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಎರಡಕ್ಕೂ ಅನುವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಿಂದ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಅಂತಜರ್ಲ ತಾಣ- www.varunamitra.kar.gov.in ದಲ್ಲಿ ವಲಯವಾರು ಪ್ರವಾಹ ಸಂಭವನೀಯ ಪ್ರದೇಶ ನಕ್ಷೆ, ಮಳೆ ಮುನ್ಸೂಚನೆ, ಪ್ರವಾಹ ಮುನ್ಸೂಚನೆ, ದತ್ತಾಂಶ ಡೌನ್ ಲೋಡ್, ಪ್ರಸ್ತುತ ಮಳೆ ಮಾಹಿತಿ, 24 ಗಂಟೆಗಳ ಸಂಚಿತ ಮಳೆ ಮಾಹಿತಿ, ವಲಯವಾರು ರಿಯಲ್ ಟೈಮ್ ಪ್ರವಾಹ ಮಾಹಿತಿ, ನಿರ್ದಿಷ್ಟ ಸ್ಥಳದ ಪ್ರವಾಹ ಮಾಹಿತಿಯ ನಕ್ಷೆಯನ್ನು ಒದಗಿಸಲಾಗುತ್ತದೆ.

Facebook Comments