ಮೇಕೆದಾಟು ಯೋಜನೆ ಜಾರಿಯಾಗಬಾರದು : ಸಂವಾದ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.14- ಪರಿಸರ ಉಳಿವಿಗಾಗಿ ಮೇಕೆದಾಟು ಯೋಜನೆಯ ಜಾರಿಯಾಗಬಾರದು ಎಂದು ಪರಿಸರ ಸಂರಕ್ಷಣಾ ಸಮಿತಿಯಿಂದ ಪ್ರೆಸ್ ಕ್ಲಬ್ ಆವರಣದಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಸಂವಾದದಲ್ಲಿ ಭಾಗವಹಿಸಿದ್ದರು.

ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಮಾತನಾಡುತ್ತಾ ಮೇಕೆದಾಟು ಪರವಾಗಿದ್ದೇವೆ ಆದರೆ ಅಲ್ಲಿ ಕಟ್ಟುವ ಡ್ಯಾಮಿಗೆ ನಮ್ಮ ವಿರೋಧ ಇದೆ . ಭೂಮಿಯ ಮೇಲೆ ಸ್ವತಂತ್ರವಾಗಿ ನಿರ್ಭೀತಿಯಿಂದ ಜೀವಿಸುವ ಹಕ್ಕು ಸಕಲ ಜೀವರಾಶಿಗಳಿಗೂ ಇದೆ. ಆಣೆಕಟ್ಟು ನಿರ್ಮಾಣವಾದರೆ ಸಕಲ ಜೀವಸಂಕುಲ ಸರ್ವನಾಶವಾಗುತ್ತದೆ ಅದಕ್ಕೆ ನಾವು ಬಿಡುವುದಿಲ್ಲ ಎಂದರು.

ನಾನು ಅಲ್ಲಿನ ಸ್ಥಳೀಯರನ್ನು ಮಾತನಾಡಿಸಿದಾಗ ನೂರಾರು ಹಳ್ಳಿಗಳು ಮುಳುಗಲಿದ್ದು, ಹತ್ತಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ನಮ್ಮ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಜೀವನ ಮೂರಾಬಟ್ಟೆಯಾಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಆದ್ದರಿಂದ ಸರ್ಕಾರಗಳಿಗೆ ಅಣೆಕಟ್ಟು ಕಟ್ಟುವುದರಿಂದ ಮಾತ್ರ ನೀರಿನ ಬವಣೆಯನ್ನು ನೀಗಿಸಲು ಸಾಧ್ಯವಿಲ್ಲ ಅದರ ಬದಲಾಗಿ ಮಳೆಯ ನೀರನ್ನು ವೈಜ್ಞಾನಿಕ ಶೇಖರಣೆ ಮಾಡಿ ಕೆರೆ ಕುಂಟೆಗಳಲ್ಲಿ ನೀರು ತುಂಬಿಸಿ ಅಂತರ್ಜಲವನ್ನು ವೃದ್ಧಿ ಮಾಡುವುದು, ಹಾಗೂ ಬೆಂಗಳೂರಿನಲ್ಲಿ ಪೋಲಾಗುತ್ತಿರುವ ಶೇ. 40ರಷ್ಟು ನೀರನ್ನು ಪೋಲಾಗದಂತೆ ತಡೆದರೆ ಇರುವ ನೀರಿನಲ್ಲಿ ಬೆಂಗಳೂರಿಗೆ ಜಲಕ್ಷಾಮವನ್ನು ನೀಗಿಸಬಹುದು ಎಂದು ಸರ್ಕಾರಕ್ಕೆ ಸಲಹೆ ಕೊಟ್ಟರು.

ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮೂರು ಪಕ್ಷಗಳು ಮೇಕೆದಾಟು ಯೋಜನೆ ನೆಪದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಕರ್ನಾಟಕ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ನೂರಾರು ಎಕರೆ ನಾಶವಾಗಿ ಕೋಟಿ ಕಾಂಟ್ರಾಕ್ರ್ಟ ಮತ್ತು ರಾಜಕೀಯ ವ್ಯಕ್ತಿಗಳ ಜೋಬು ತುಂಬಲಿದೆ ಯೋಜನೆಯಿಂದ ಯಾರಿಗೂ ಅನುಕೂಲವಾಗುವುದಿಲ್ಲ ಎಂದರು.

ಸರ್ಕಾರ ಅಣೆಕಟ್ಟು ಕಟ್ಟಲೇಬೇಕು ಎಂದು ನಿರ್ಧರಿಸಿದರೆ ಮುಂದಿನ ದಿನಗಳಲ್ಲಿ ಚಿಂತಕರು, ಕವಿಗಳು, ಸಂಘಸಂಸ್ಥೆಗಳು, ಹೋರಾಟಗಾರರು ಎಲ್ಲರೂ ಸೇರಿ ಬೃಹತ್ ಹೋರಾಟ ಮಾಡಲಿದ್ದೇವೆ ಎಂದು ಸರ್ಕಾರವನ್ನು ಎಚ್ಚರಿಸಿದರು.  ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತೆ ನಿರ್ದೇಶಕಿ ಕವಿತಾ ಲಂಕೇಶ್, ಹ.ರ ಮಹೇಶ್, ಅಮರ್ ಕುಮಾರ್, ಕೃಷ್ಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

Facebook Comments