ಮೇಲುಕೋಟೆ ವೈರಮುಡಿಗೆ ದೀಪಾಲಂಕಾರದ ಮೆರಗು

ಈ ಸುದ್ದಿಯನ್ನು ಶೇರ್ ಮಾಡಿ

ಮೇಲುಕೋಟೆ , ಮಾ.22- ಸಾಂಪ್ರದಾ ಯಿಕ ವೈರಮುಡಿ ಉತ್ಸವ ಇದೇ 24ರಂದು ನಡೆಯುತ್ತಿರುವ ಹಿನ್ನಲೆಯಲ್ಲಿ ಮೇಲುಕೋಟೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದು ಪ್ರಮುಖ ಬೀದಿಗಳು ಕಲ್ಯಾಣಿ, ದೇವಾಲಯಗಳು ದೀಪಾಲಂಕಾರದಿಂದ ಜಗಮಗಿಸುತ್ತಿದೆ. ಈ ಬಾರಿ ಕಳೆದ ಮೂರು ದಶಕಗಳಲ್ಲೇ ಕಾಣದ ರೀತಿ ವೈರಮುಡಿ ಜಾತ್ರಾ ಮಹೋತ್ಸವಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದ್ದು , ದೀಪಾಲಂಕಾರ ವೈಭವ ಕಣ್ತುಂಬಿಕೊಳ್ಳಲು ಸುತ್ತಮುತ್ತಲ ಗ್ರಾಮಸ್ಥರು ಮೇಲುಕೋಟೆಗೆ ಬಂದು ಹೋಗುತ್ತಿದ್ದಾರೆ

ಮೇಲುಕೋಟೆಯ ರಾಜಬೀದಿ, ಉತ್ಸವ ಬೀದಿ, ಕಲ್ಯಾಣಿ, ಚೆಲುವ ನಾರಾಯಣಸ್ವಾಮಿ ದೇವಾಲಯ ಅಕ್ಕ-ತಂಗಿಕೊಳ, ರಾಯ ಗೋಪುರ ಕಲ್ಯಾಣಿಬೀದಿ ಮತ್ತಿತರ ಕಡೆಗಳಲ್ಲಿ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ಚೆಲುವ ನಾರಾಯಣಸ್ವಾಮಿ ದೇಗುಲದ ಗಂಡು ಬೇರುಂಡ ರಾಜಗೋಪುರ 15 ಸೆಕೆಂಡಿಗೊಮ್ಮೆ ಬದಲಾಗುವ ಆಕರ್ಷಕ ಪಾರ್ಕರ್ ಲೈಟ್‍ನಿಂದ ಕಂಗೊಳಿಸುತ್ತಿದೆ. ಪ್ರಮುಖ ಬೀದಿಗಳ ಎಲ್‍ಇಡಿ ದೀಪಾಗಳಿಂದ ಸೊಬಗು ಇಮ್ಮಡಿಗೊಂಡಿದೆ.

ಪ್ರಮುಖ ಆಕರ್ಷಣೆ ಯೋಗ ನರಸಿಂಹಸ್ವಾಮಿ ಬೆಟ್ಟಕ್ಕೂ ಲೇಸರ್ ಲೈಟ್, ಸರ್ಚ್‍ಲೈಟ್ ಬಳಸಿ ಅತ್ಯಾಕರ್ಷಕ ದೀಪಾಲಂಕಾರ ಮಾಡಲಾಗಿದೆ. ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾ ಯಣಗೌಡ ದೀಪಾಲಂಕಾರ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಾಲಯ ಮತ್ತು ಉತ್ಸವ ಬೀದಿಗಳಲ್ಲಿ ಮತ್ತಷ್ಟು ವಿಶೇಷ ದೀಪಾಲಂಕಾರ ಮಾಡಲು ಚೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ದೀಪಾಲಂಕಾರಕ್ಕೆ ಶ್ರಮಿಸುತ್ತಿ ರುವ ಚೆಸ್ಕಾಂ ಮಂಡ್ಯ ವೃತ್ತದ ಅಧೀಕ್ಷಕ ಇಂಜಿನಿಯರ್ ಸ್ವಾಮಿ ಅವರನ್ನು ಸಚಿವರು ಸನ್ಮಾನಿಸಿದರು. ಸಚಿವ ಡಾ.ಕೆ.ಸಿ ನಾರಾಯಣಗೌಡರ ಕಾಳಜಿಯಿಂದಾಗಿ ಮುಖ್ಯಮಂತ್ರಿ ಯಡಿ ಯೂರಪ್ಪ ವೈರಮುಡಿ ಜಾತ್ರಾ ಮಹೋತ್ಸವಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ. ಮುಖ್ಯಮಂತ್ರಿಗಳೇ ಮೈಸೂರಿನ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು.

ದಸರಾ ಪಾಂಡವಪುರ ಉಪಭಾಗಾಧಿಕಾರಿ ಶಿವಾನಂದಮೂರ್ತಿ, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ ಮೇಲುಕೋಟೆ ಸಹಾಯಕ ಇಂಜಿನಿಯರ್ ಸತೀಶ್ ಇದ್ದರು.

Facebook Comments