‘ಮಿ ಟೂ’ ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯು..!

ಈ ಸುದ್ದಿಯನ್ನು ಶೇರ್ ಮಾಡಿ

arjun-sarja-And-shruti-hari

ಬೆಂಗಳೂರು, ಅ.20- ಘಟಾನುಘಟಿಗಳನ್ನೂ ಬೆಚ್ಚಿ ಬೀಳಿಸಿರುವ ಮೀ-ಟೂ ಬಲೆಗೆ ಇದೀಗ ದಕ್ಷಿಣ ಭಾರತದ ಬಹುಭಾಷಾ ನಟ ಅರ್ಜುನ್ ಸರ್ಜಾ ಸಿಲುಕಿದ್ದಾರೆ. ಕನ್ನಡದ ಈ ಖ್ಯಾತ ನಟನ ವಿರುದ್ಧ ಆರೋಪ ಮಾಡಿರುವುದು ಬೇರೆ ಯಾರೂ ಅಲ್ಲ, ಕೇರಳದಿಂದ ಕರ್ನಾಟಕಕ್ಕೆ ವಲಸೆ ಬಂದು ಕನ್ನಡದವರೇ ಆಗಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಖ್ಯಾತ ಚಿತ್ರನಟಿ ಶೃತಿ ಹರಿಹರನ್.

ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿರುವ ಈ ಆರೋಪ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.  ಈ ಹಿಂದೆ ಹಲವಾರು ಸಂದರ್ಶನಗಳಲ್ಲಿ ನಾನೂ ಕೂಡ ಲೈಂಗಿಕ ಕಿರುಕುಳಕ್ಕೆ ಬಲಿಯಾಗಿದ್ದೆ ಎಂದು ಹೇಳಿಕೆ ನೀಡಿದ್ದ ಶೃತಿ ಹರಿಹರನ್ ಕಿರುಕುಳ ನೀಡಿದವರ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.
ಇದೇ ಪ್ರಥಮ ಬಾರಿಗೆ ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ.

# ಯಾವಾಗ…?
ಕನ್ನಡದ ಹಿರಿಯ ನಟ ಶಕ್ತಿ ಪ್ರಸಾದ್ ಅವರ ಪುತ್ರರಾಗಿರುವ ಅರ್ಜುನ್ ಸರ್ಜಾ ಅವರು ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಮತ್ತಿತರ ಭಾಷೆಗಳಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ.  ಇಂತಹ ಖ್ಯಾತ ಚಿತ್ರನಟನ 150ನೆ ಕನ್ನಡ ಚಿತ್ರವಾದ ವಿಸ್ಮಯ ಸಿನಿಮಾದಲ್ಲಿ ಅವರ ಎದುರು ನಾಯಕಿಯಾಗಿ ಶೃತಿ ಹರಿಹರನ್ ನಟಿಸಿದ್ದರು.

ಮಿ ಟೂ ಅಭಿಯಾನ ಶುರುವಾದ ನಂತರ ವಿಸ್ಮಯ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಾಯಕನಟರಾಗಿದ್ದ ಅರ್ಜುನ್ ಸರ್ಜಾ ಅವರು ಗಡಿರೇಖೆ ದಾಟಿದ್ದರು ಎಂದು ಹರಿಹರನ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನ ಈ ವಿವಾದಕ್ಕೆ ರೆಕ್ಕೆಪುಕ್ಕ ಮೂಡಿಸಿದೆ.  ವಿಸ್ಮಯ ಚಿತ್ರಕ್ಕೂ ಮೊದಲು ನಾನು ಹಲವಾರು ಚಿತ್ರಗಳಲ್ಲಿ ನಟಿಸಿದ್ದೆ. ಆ ಸಂದರ್ಭದಲ್ಲಿ ನನಗೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ, ವಿಸ್ಮಯ ಚಿತ್ರದ ಸಂದರ್ಭದಲ್ಲಿ ನಾಯಕ-ನಾಯಕಿ ನಡುವಿನ ಪ್ರಣಯ ದೃಶ್ಯ ಚಿತ್ರೀಕರಣದ ನಂತರ ನನಗೆ ಈ ಅನುಭವ ಆಗಿತ್ತು.

ನಾಯಕ-ನಾಯಕಿ ಅಪ್ಪಿಕೊಳ್ಳುವ ದೃಶ್ಯದ ಚಿತ್ರೀಕರಣ ಮುಗಿದ ನಂತರ ಸರ್ಜಾ ಅವರು ನನ್ನ ಬಳಿ ಬಂದು ಇನ್ನಷ್ಟು ಬಿಗಿದಪ್ಪಿದ್ದರೆ ಚಿತ್ರೀಕರಣ ಮತ್ತಷ್ಟು ಸೂಪರ್ ಆಗಿರುತ್ತಿತ್ತು ಎಂದು ಮತ್ತೊಮ್ಮೆ ನನ್ನನ್ನು ಬಿಗಿಯಾಗಿ ಅಪ್ಪಿಕೊಂಡಿದ್ದರು.  ಮಹಾನ್ ನಟನ ಈ ವರ್ತನೆ ನನ್ನನ್ನು ತಬ್ಬಿಬ್ಬುಗೊಳಿಸಿತ್ತು. ಕೂಡಲೇ ನಿರ್ದೇಶಕರ ಬಳಿಗೆ ತೆರಳಿ ಇನ್ನು ಮುಂದೆ ನಾನು ಶೂಟಿಂಗ್‍ಗೆ ಬರುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದೆ ಎಂದು ಹರಿಹರನ್ ಹೇಳಿಕೊಂಡಿದ್ದಾರೆ.

 

Facebook Comments

Sri Raghav

Admin