ದೋಣಿ ಮುಳುಗಿ  31 ವಲಸಿಗರು ಜಲಸಮಾಧಿ

ಈ ಸುದ್ದಿಯನ್ನು ಶೇರ್ ಮಾಡಿ

ಪ್ಯಾರಿಸ್,ನ.25- ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ದೋಣಿ ಮುಳುಗಿ ಬ್ರಿಟನ್‍ಗೆ ಪ್ರಯಾಣಿಸುತ್ತಿದ್ದ ಕನಿಷ್ಠ ಪಕ್ಷ 31 ವಲಸಿಗರು ಮೃತಪಟ್ಟಿದ್ದಾರೆ. ಇದು ವಲಸಿಗರಿಗೆ ಸಂಬಂಧಪಟ್ಟಂತೆ ಇದುವರೆಗಿನ ಅತಿದೊಡ್ಡ ದುರಂತ ಎಂದು ಫ್ರಾನ್ಸ್‍ನ ಒಳಾಡಳಿತ ಸಚಿವ ಗೆರಾಲ್ಡ್ ಡಾರ್ಮನಿನ್ ಅವರು ತಿಳಿಸಿದ್ದಾರೆ.

ದೋಣಿಯಲ್ಲಿ 34 ಜನರು ಪ್ರಯಾಣಿಸುತ್ತಿದ್ದರೆಂದು ನಂಬಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಅಧಿಕಾರಿಗಳು ಐವರು ಮಹಿಳೆಯರು ಮತ್ತು ಓರ್ವ ಬಾಲಕಿ ಸೇರಿದಂತೆ 31 ಶವಗಳನ್ನು ಪತ್ತೆ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಬದುಕುಳಿದಿದ್ದಾರೆ. ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಪ್ರಯಾಣಿಕರು ಯಾವ ದೇಶಕ್ಕೆ ಸೇರಿದವರೆಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.

ಸಂಘರ್ಷ ಅಥವಾ ಬಡತನದಿಂದಾಗಿ ತಮ್ಮ ದೇಶಗಳನ್ನು ತೊರೆದು ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬ್ರಿಟನ್‍ನಲ್ಲಿ ಆಶ್ರಯ ಅಥವಾ ಉತ್ತಮ ಅವಕಾಶಗಳನ್ನು ಅರಸಿ ಫ್ರಾನ್ಸ್‍ನಿಂದ ಈ ದೋಣಿಯಲ್ಲಿ ವಲಸಿಗರು ಪ್ರಯಾಣ ಬೆಳೆಸಿದ್ದರು. ಈ ದೋಣಿ ಸಮುದ್ರಯಾನಕ್ಕೆ ತಕ್ಕುದಾಗಿರಲಿಲ್ಲ.

ಬದುಕಿ ಉಳಿದಿರುವವರಿಗಾಗಿ ಜಂಟಿ ಫ್ರೆಂಚ್-ಬ್ರಿಟಿಷ್ ಶೋಧಕಾರ್ಯಾಚರಣೆ ಬುಧವಾರ ತಡರಾತ್ರಿಯೂ ಮುಂದುವರೆದಿದೆ.
ನಾಲ್ವರು ಶಂಕಿತ ಅಕ್ರಮ ಮಾನವ ಸಾಗಾಣಿಕೆದಾರರನ್ನುಬುಧವಾರ ಬಂಧಿಸಲಾಗಿದೆ ಎಂದು ಡಾರ್ಮನಿನ್ ಅವರು ಫ್ರೆಂಚ್ ಬಂದರು ನಗರ ಕಲೈಸ್‍ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇಬ್ಬರು ಶಂಕಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಅವರು ಹೇಳಿದರು.

Facebook Comments