ಎರವಲು ಮತ್ತು ಅನ್ಯಸೇವೆಯ ಮೇಲೆ ನಿಯೋಜನೆಗೊಂಡಿರುವ ನೌಕರರು ವಾಪಸ್ : ಸಚಿವ ಈಶ್ವರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15- ಎರವಲು ಮತ್ತು ಅನ್ಯಸೇವೆಯ ಮೇಲೆ ಇಲಾಖೆಯಿಂದ ನಿಯೋಜನೆಗೊಂಡಿರುವ ಎಲ್ಲ ನೌಕರರು ಮತ್ತು ಸಿಬ್ಬಂದಿಯನ್ನು ವಾಪಸ್ ಕರೆಸಲು ಆದೇಶ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಯಲ್ಲಿ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದನದ ಸದಸ್ಯರು ಎಲ್ಲರೂ ಒಪ್ಪಿದ್ದಾರೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹೊರಗಡೆ ಹೋಗಿರುವ ಎಲ್ಲ ಸಿಬ್ಬಂದಿಯನ್ನು ವಾಪಸ್ ಕರೆಸಲಾಗುವುದು. ಅಲ್ಲದೆ ಇನ್ನು ಮುಂದೆ ಯಾವುದೇ ಸಿಬ್ಬಂದಿಯನ್ನು ಇಲಾಖೆ ಸೇವೆಯಿಂದ ಅನ್ಯ ಸೇವೆಗೆ ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇಲಾಖೆಯಲ್ಲಿ ಪಂಚಾಯ್ತಿ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಲ್ಲದೆ ಸಮಸ್ಯೆಯಾಗುತ್ತಿದೆ. ಕೆಲವು ಶಾಸಕರು, ಸಚಿವರು, ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿಯನ್ನು ಆಪ್ತ ಕಾರ್ಯದರ್ಶಿ, ಆಪ್ತ ಸಹಾಯಕ ಹುದ್ದೆಗೆ ಪಡೆದಿದ್ದಾರೆ. ಹೀಗಾಗಿ ಸಮಸ್ಯೆಯಾಗುತ್ತಿದೆ ಎಂದಾಗ, ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ, ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ಸದಸ್ಯರು, ಎರವಲು ಸೇವೆ ಮೇಲೆ ಹೋಗಿರುವ ಸಿಬ್ಬಂದಿಯನ್ನು ವಾಪಸ್ ಕರೆಸುವಂತೆ ಆಗ್ರಹಿಸಿದರು. ಆಗ ಮೇಲಿನಂತೆ ಸಚಿವರು ಪ್ರತಿಕ್ರಿಯಿಸಿದರು.

ಅತಿವೃಷ್ಟಿ ಹಾಗೂ ಹೆಚ್ಚಿನ ಮಳೆಯಿಂದ ರಾಜ್ಯದಲ್ಲಿ ರಸ್ತೆಗಳು ಹಾಳಾಗಿದ್ದು, ಕಳೆದ ವರ್ಷ ರಸ್ತೆ ದುರಸ್ತಿ ನಿರ್ಮಾಣಕ್ಕೆ ಸಾಧ್ಯವಾದಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಈ ವರ್ಷ ಆರ್ಥಿಕ ಇಲಾಖೆಯಿಂದ ಹಣ ಬಂದಿಲ್ಲ. ಹಣ ಬಂದ ಕೂಡಲೇ ಶಾಸಕರ ಕ್ಷೇತ್ರಗಳ ಬೇಡಿಕೆಗೆ ತಕ್ಕಂತೆ ಸಮಯಕ್ಕೆ ಸರಿಯಾಗಿ ಅನುದಾನ ಮಂಜೂರು ಮಾಡಲು ಪ್ರಯತ್ನಿಸಲಾಗುವುದು.

5 ಲಕ್ಷ ರೂ.ವರೆಗಿನ ಕಾಮಗಾರಿ(ಪೀಸ್ ವರ್ಕ್)ಗಳಿಗೆ ಸೆ.3ರವರೆಗೆ ಅವಕಾಶವಿತ್ತು. ಅದನ್ನು ಮುಂದುವರೆಸುವ ಬಗ್ಗೆ ಸಿಎಂ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. ಪುತ್ತೂರು ತಾಲ್ಲೂಕು ಪಂಚಾಯ್ತಿಯಲ್ಲಿ ಮಂಜೂರಾದ 26 ಹುದ್ದೆಗಳ ಪೈಕಿ 5 ಹುದ್ದೆಗಳು ಭರ್ತಿಯಾಗಿದ್ದು, ಖಾಲಿ ಇರುವ 21 ಹುದ್ದೆಗಳಿಗೆ ನಿಯೋಜನೆ, ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ಜಲಧಾರೆ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಲಾಗಿದ್ದ ಕಾಮಗಾರಿಗಳನ್ನು ಜಲ ಮಿಷನ್ ಯೋಜನೆಯಡಿ ಅಳವಡಿಸಿಕೊಳ್ಳಲಾಗಿದೆ. ಎರಡು ಸಮಗ್ರ ಬಹುಗ್ರಾಮ ಯೋಜನೆಗಳಿಗೆ ಜೂ.3ರಂದು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಆ.31 ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಶಿವಾನಂದ್ ಎಸ್.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದರು.

ಯೋಜನೆ-1ರ ಅಂದಾಜು ಮೊತ್ತ 1431.48 ಲಕ್ಷ ರೂ. ಯೋಜನೆ-2ರ ಮೊತ್ತ 95451 ಲಕ್ಷ ರೂ. ಆಗಿದೆ. ಎರಡೂ ಯೋಜನೆಗಳಿಗೆ ಟೆಂಡರ್ ಸ್ವೀಕರಿಸುವ ಕೊನೆಯ ದಿನಾಂಕ ಸೆ.30 ಆಗಿದ್ದು, ಶೀಘ್ರವಾಗಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಕಾಮಗಾರಿಯನ್ನು 30 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದರು. ಆನೇಕಲ್ ತಾಲ್ಲೂಕಿನ 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ನಾಲ್ಕು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಶಾಸಕ ವಿ.ಶಿವಣ್ಣ ಅವರ ಪ್ರಶ್ನೆಗೆ ಈಶ್ವರಪ್ಪ ಉತ್ತರಿಸಿದರು.

ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಗಮನಹರಿಸಲಾಗುವುದು. ಗ್ರಾಮೀಣಾ ಭಾಗಕ್ಕೂ ನೀರು ಪೂರೈಸುವ ಬಗ್ಗೆ ಸಂಪುಟ ಸಭೆಯಲ್ಲಿ ಎರಡುಮೂರು ಬಾರಿ ಚರ್ಚೆಯಾಗಿದೆ ಎಂದು ಸಚಿವರು ಉತ್ತರಿಸಿದರು.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ 2ನೇ ಹಂತದ ಕಾಮಗಾರಿಯ ಟೆಂಡರ್ ಸೆ.30ರೊಳಗೆ ಮುಗಿಸಿ 2024ರೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕಾಂಗ್ರೆಸ್ ಶಾಸಕ ಆರ್.ನರೇಂದ್ರ ಅವರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.

Facebook Comments